ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಲ್ಲಿ ಪ್ರತಿಭಟನೆ: ಇಬ್ಬರ ಸಾವು

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಟೆಹರಾನ್‌: ನಿರುದ್ಯೋಗ ಹೆಚ್ಚಳ, ಬೆಲೆ ಏರಿಕೆ ಮತ್ತು ಆರ್ಥಿಕ ಕುಸಿತ ವಿರೋಧಿಸಿ ಇರಾನ್‌ನ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಮೂರನೇ ದಿನಕ್ಕೆ ಕಾಲಿರಿಸಿದೆ. ಪ್ರತಿಭಟನೆಯಲ್ಲಿ ಇದುವರೆಗೆ ಇಬ್ಬರು ಮೃತಪಟ್ಟಿದ್ದು, ಹಲವರನ್ನು ಬಂಧಿಸಲಾಗಿದೆ.

ಅಧ್ಯಕ್ಷ ಹಸನ್‌ ರೌಹಾನಿ ವಿರುದ್ಧ ಪ್ರತಿಭಟನಾಕಾರರು ‘ಸರ್ವಾಧಿಕಾರಿ ನಾಶವಾಗಲಿ’ ಎಂದು ಘೋಷಣೆ ಹಾಕಿದರು.

‘ಸರ್ಕಾರದ ವಿರುದ್ಧ ವಿವಿಧೆಡೆ ಸಾಮೂಹಿಕ ಪ್ರತಿಭಟನೆಗಳು ನಡೆಯುತ್ತಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲೆಡೆ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇದು ಸರ್ಕಾರಕ್ಕೂ ಅಗ್ನಿ ಪರೀಕ್ಷೆಯಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವಿರೋಧಿ ಗುಂಪುಗಳು ನೀಡಿದ ಪ್ರತಿಭಟನೆ ಕರೆಗೆ ಸಾವಿರಾರು ಜನ ಬೀದಿಗಿಳಿದಿದ್ದಾರೆ. ದುರಾದೃಷ್ಟವಶಾತ್‌ ಪ್ರತಿಭಟನೆಯಲ್ಲಿ ಪಶ್ಚಿಮ ಭಾಗದ ದೋರುದ್‌ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆದರೆ, ಪ್ರತಿಭಟನಾಕಾರರ ಮೇಲೆ ಪೊಲೀಸರು, ಮಿಲಿಟರಿ ಮತ್ತು ಭದ್ರತಾ ಪಡೆಗಳು ಗುಂಡು ಹಾರಿಸಿಲ್ಲ‘ ಎಂದು ಲೋರಿಸ್ತಾನ್‌ ಪ್ರಾಂತ್ಯದ ಉಪ ಗವರ್ನರ್‌ ಹಬೀಬುಲ್ಲಾ ಖೋಜಾಸ್ತೆಪೊರ್‌  ತಿಳಿಸಿದ್ದಾರೆ.

ಇಸ್ಫಹಾನ್, ಮಶ್‌ಹದ್‌ ಮತ್ತಿತರ ಸಣ್ಣ ಪಟ್ಟಣಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿರುವುದನ್ನು ಸಾಮಾಜಿಕ ಜಾಲತಾಣಗಳು ತೋರಿಸಿವೆ. ಟೆಹರಾನ್‌ನ ಟೌನ್‌ಹಾಲ್‌ ಸೇರಿದಂತೆ ದೇಶದ ವಿವಿಧೆಡೆ ಬ್ಯಾಂಕ್‌ ಮತ್ತು ಪಾಲಿಕೆ ಕಟ್ಟಡಗಳ ಮೇಲೆ ಪ್ರತಿ ಭಟನಾಕಾರರು ದಾಳಿ ನಡೆಸಿದ್ದಾರೆ.

‘ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸಿರುವ ಪ್ರತಿಭಟನಾಕಾರರು ತಕ್ಕ ಬೆಲೆ ತೆರಬೇಕಾಗುತ್ತದೆ. ಹಿಂಸೆ, ಭಯ ಮತ್ತು ಭಯೋತ್ಪಾದನೆ ಹರಡುವುದನ್ನು ಸಮರ್ಥವಾಗಿ ಎದುರಿಸಲಾಗುವುದು’ ಎಂದು ಗೃಹ ಸಚಿವ ಅಬ್ದುಲ್‌ರೆಹಮಾನ್‌ ರೆಹಮಾನಿ ಫಜಿಲ್ ತಿಳಿಸಿದ್ದಾರೆ.

ಟೆಹರಾನ್‌ನಿಂದ ದಕ್ಷಿಣಕ್ಕೆ 300 ಕಿ.ಮೀ ದೂರ ಇರುವ ಅರಾಕ್‌ನಲ್ಲಿ  80ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವದಂತಿಗಳನ್ನು ತಡೆಯಲು ಇರಾನ್‌ನಲ್ಲಿ ತಾತ್ಕಾಲಿಕವಾಗಿ ಶನಿವಾರ ರಾತ್ರಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿತ್ತು. ಕೆಲ ಸಮಯದ ನಂತರ ಮತ್ತೆ ಸೌಲಭ್ಯ ಕಲ್ಪಿಸಲಾಯಿತು. ಪ್ರತಿಭಟನೆಗಳ ಕುರಿತು ಅಧ್ಯಕ್ಷ ಹಸನ್‌ ರೌಹಾನಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಆರ್ಥಿಕ ಸಮಸ್ಯೆಗಳೇ ಕಾರಣ’
ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳ, ಬೆಲೆ ಏರಿಕೆ ಮತ್ತು ಆರ್ಥಿಕ ಹಗರಣಗಳಿಂದಾಗಿ ಕೆಳ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಡಳಿತ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಟೆಹರಾನ್‌ ವಿಶ್ವವಿದ್ಯಾಲಯದ ಮುಂದೆ ಸಾವಿರಾರು ಜನ ಪ್ರತಿಭಟನೆ ನಡೆಸುತ್ತಿದ್ದಾರೆ.

‘ಹಣಕಾಸು ಸಂಸ್ಥೆಗಳು ದಿವಾಳಿಯಾಗಿರುವುದರಿಂದ ಜನರು ತಮ್ಮ ಹಣ ಕಳೆದುಕೊಂಡಿದ್ದಾರೆ. ಆರ್ಥಿಕ ಸಮಸ್ಯೆಗಳು ಕೆಳ ವರ್ಗಗಳ ಜನರನ್ನೇ ಹೆಚ್ಚಾಗಿ ಕಾಡಿರುವುದು ಈ ಪ್ರತಿಭಟನೆಗಳಿಗೆ ಕಾರಣ’ ಎಂದು ಸುಧಾರಣಾವಾದಿ ಮಾಧ್ಯಮಜಾಲ ‘ನಜರ್‌’ನ ಮುಖ್ಯ ಸಂಪಾದಕ ಪಾಯಂ ಪರ್‌ಹಿಜ್‌ ತಿಳಿಸಿದ್ದಾರೆ.

*
ಜನರ ಮೇಲೆ ದೌರ್ಜನ್ಯ ನಡೆಸುವ ಸರ್ಕಾರ ಬಹುದಿನ ಅಧಿಕಾರದಲ್ಲಿ ಉಳಿಯುವುದಿಲ್ಲ.
-ಡೊನಾಲ್ಡ್‌ ಟ್ರಂಪ್‌,
ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT