ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಲೂಚಿಸ್ತಾನದಲ್ಲಿ ಆತ್ಮಹತ್ಯಾ ದಾಳಿ: ಪಾಕಿಸ್ತಾನದ 9 ಪೊಲೀಸರ ಸಾವು

Published : 6 ಮಾರ್ಚ್ 2023, 9:34 IST
ಫಾಲೋ ಮಾಡಿ
Comments

ಕರಾಚಿ: ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ನಡೆದ ಆತ್ಮಹತ್ಯಾ ದಾಳಿಯಲ್ಲಿ 9 ಮಂದಿ ಪೊಲೀಸರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ.

ಬಲೂಚಿಸ್ತಾನದ ಕಾಸ್ಟಾಬ್ಯುಲರಿ(ಬಿಸಿ) ಟ್ರಕ್ ಕ್ವೆಟ್ಟಾ–ಸಿಬಿ ಹೆದ್ದಾರಿಯ ಕಂಬ್ರಿ ಸೇತುವೆ ಮೇಲೆ ಸಂಚರಿಸುತ್ತಿದ್ದ ಸಂದರ್ಭ ವಾಹನದ ಸಮೀಪವೇ ಈ ದಾಳಿ ನಡೆದಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ದಿನಪತ್ರಿಕೆ ವರದಿ ಮಾಡಿದೆ.

ಇದೊಂದು ಆತ್ಮಹತ್ಯಾ ದಾಳಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಕಚ್ಚಿ ಪ್ರದೇಶದ ಎಸ್ಎಸ್‌ಪಿ ಮೆಹಮ್ಮೂದ್ ನೊಟೆಜಾಯ್ ತಿಳಿಸಿದ್ದಾರೆ.

ಆದರೂ ತನಿಖಾ ವರದಿ ಬಂದ ಬಳಿಕವೇ ಸ್ಫೋಟದ ನಿಖರ ಕಾರಣ ತಿಳಿದುಬರಲಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ತೆರಳಿದ್ದು, ಶೋಧ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಈವರೆಗೆ, ಯಾವುದೇ ಭಯೋತ್ಪಾದಕ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.

ಸ್ಫೋಟ ಸಂಭವಿಸಿದ ಕೆಲ ಹೊತ್ತಿನಲ್ಲೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ ಕೈಗೊಂಡಿದೆ.

ಬಲೂಚಿಸ್ತಾನದ ಕಾಸ್ಟಾಬ್ಯುಲರಿ(ಬಿಸಿ) ಇಲಾಖೆಯು ಜೈಲು ಸೇರಿದಂತೆ ಸೂಕ್ಷ್ಮ ಪ್ರದೇಶಗಳು ಮತ್ತು ಪ್ರಮುಖ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುತ್ತದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸರ್ಕಾರ ಮತ್ತು ಭಯೋತ್ಪಾದಕ ಸಂಘಟನೆ ತೆಹ್ರೀಕ್ ಇ ತಾಲಿಬಾನ್(ಟಿಟಿಪಿ) ನಡುವೆ ಮಾತುಕತೆ ಮುರಿದುಬಿದ್ದ ಬಳಿಕ ಬಲೂಚಿಸ್ತಾನದಲ್ಲಿ ನಿರಂತರವಾಗಿ ಸ್ಫೋಟ ನಡೆಯುತ್ತಿವೆ. ಹಿಂಸಾಚಾರ, ನಿರ್ದಿಷ್ಟ ಪ್ರದೇಶಗಳನ್ನು ಗುರುಯಾಗಿಸಿಕೊಂಡು ಸ್ಫೋಟಗಳು ನಡೆಯುತ್ತಿವೆ.

ಫೆಬ್ರುವರಿ 26ರಂದು ಬಲೂಚಿಸ್ತಾನದ ಮಾರುಕಟ್ಟೆಯಲ್ಲಿ ಸಂಭವಿಸಿದ ಐಇಡಿ ಸ್ಫೋಟದಲ್ಲಿ 4 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT