ಲಂಡನ್: 19 ವರ್ಷದ ಚೀನಾ–ಅಮೆರಿಕನ್ ಪೈಲಟ್ ಈಥನ್ ವಾ ಮುಂದಿನ ವಾರ ಭಾರತದ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.
ಈ ವಿಷಯವನ್ನು ಅವರು ಸೌದಿ ಅರೇಬಿಯಾದಿಂದ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಮಕ್ಕಳಲ್ಲಿನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಲು ಅಗತ್ಯವಿರುವ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅವರು ಏಳು ಖಂಡಗಳಲ್ಲಿ ಒಬ್ಬರೇ ವಿಮಾನ ಹಾರಾಟ ನಡೆಸುತ್ತಿದ್ದಾರೆ. ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದ ಯಾನವೂ ಇದಾಗಿದೆ.
‘ಫ್ಲೈಟ್ ಅಗೇನ್ಸ್ಟ್ ಕ್ಯಾನ್ಸರ್’ ಎನ್ನುವ ಹೆಸರಿನ ಯಾನವು ಸ್ವಿಟ್ಜರ್‌ಲೆಂಡ್‌ನ ಜಿನೀವಾದಲ್ಲಿ ಶುರುವಾಗಿತ್ತು. 50 ಸಾವಿರ ಮೈಲು ದೂರದ ಪ್ರಯಾಣವು 75 ಟೇಕಾಫ್‌ಗಳು ಹಾಗೂ ಲ್ಯಾಂಡಿಂಗ್‌ಗಳನ್ನು ಒಳಗೊಂಡಿದೆ. 60 ದೇಶಗಳಲ್ಲಿ ಅವರು ಸಂಚರಿಸಿದ್ದಾರೆ. ಟೆನೆಸ್ಸಿಯ ಮೆಂಫಿಸ್‌ನಲ್ಲಿ ಇರುವ ಸೇಂಟ್ ಜ್ಯೂಡ್ ಮಕ್ಕಳ ಕಾಯಿಲೆಗಳ ಸಂಶೋಧನಾ ಆಸ್ಪತ್ರೆಗಾಗಿ ಅವರು 10 ಲಕ್ಷ ಡಾಲರ್ ದೇಣಿಗೆ ಸಂಗ್ರಹಿಸಲು ನಿಶ್ಚಯಿಸಿದ್ದಾರೆ.