ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಕೆಯಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ಚಿಂತಾಜನಕ: ಮಾನವ ಹಕ್ಕುಗಳ ಹೋರಾಟಗಾರರು

Published 23 ಮಾರ್ಚ್ 2024, 13:54 IST
Last Updated 23 ಮಾರ್ಚ್ 2024, 13:54 IST
ಅಕ್ಷರ ಗಾತ್ರ

ಜಿನೀವಾ: ದಕ್ಷಿಣ ಏಷ್ಯಾದಲ್ಲಿ ವಿಶೇಷವಾಗಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಇಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಹೋರಾಟಗಾರರು ಧ್ವನಿ ಎತ್ತಿದ್ದಾರೆ. ಅಲ್ಪಸಂಖ್ಯಾತರ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ಅನುಸರಿಸುತ್ತಿರುವ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.

ಎನ್‌ಇಪಿ-ಜೆಕೆಜಿಬಿಎಲ್ (ನ್ಯಾಷನಲ್ ಇಕ್ವಾಲಿಟಿ ಪಾರ್ಟಿ ಜಮ್ಮು-ಕಾಶ್ಮೀರ, ಗಿಲ್ಗಿಟ್ ಬಾಲ್ಟಿಸ್ತಾನ್ ಆ್ಯಂಡ್‌ ಲಡಾಖ್) ಇಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಮಾನವ ಹಕ್ಕುಗಳ ಹೋರಾಟಗಾರರು ಪಾಲ್ಗೊಂಡಿದ್ದರು.

ಅಲ್ಪಸಂಖ್ಯಾತರ ಸಮಸ್ಯೆಗಳ ವಿಷಯ ತಜ್ಞರಾದ ಪ್ರೊ. ನಿಕೊಲಸ್‌ ಲೆವ್ರತ್‌, ಪತ್ರಕರ್ತ ಮತ್ತು ಗ್ರೀಸ್‌ ಮಾಜಿ ಸಂಸದ ಕಾನ್‌ಸ್ಟ್ಯಾಂಟಿನ್‌  ಬೊಗ್ದಾನೊಸ್‌, ಬ್ರಿಟನ್‌ ಪತ್ರಕರ್ತ ಹಾಗೂ ಲೇಖಕ ಹಂಫ್ರೆ ಹಾಕ್‌ಸ್ಲೆ, ಎನ್‌ಇಪಿ –ಜೆಕೆಜಿಬಿಎಲ್‌ ಸಂಸ್ಥಾಪಕ ಅಧ್ಯಕ್ಷ ಸಜ್ಜದ್‌ ರಾಜಾ, ಗಿಲ್ಗಿಟ್‌– ಬಾಲ್ಟಿಸ್ತಾನ್ ನಿವಾಸಿ ಸೆಂಗೆ ಸೆರಿಂಗ್‌ ಅವರಿದ್ದ ಸಮಿತಿಯು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ.

ಪಾಕಿಸ್ತಾನದಲ್ಲಿ ಅದರಲ್ಲೂ ವಿಶೇಷವಾಗಿ ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಗಿಲ್ಗಿಟ್‌–ಬಾಲ್ಟಿಸ್ತಾನ್‌ನಲ್ಲಿ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಸಮಿತಿ ಬೆಳಕು ಚೆಲ್ಲಿದೆ.

ಪಾಕ್‌ ನೀತಿಗೆ ತೀವ್ರ ಖಂಡನೆ: ಅಲ್ಪಸಂಖ್ಯಾತರ ಬಗ್ಗೆ ಪಾಕಿಸ್ತಾನಿ ಸರ್ಕಾರ ಅನುಸರಿಸಿದ ನೀತಿಗಳು ಮತ್ತು ಈ ಭೂಪ್ರದೇಶದಲ್ಲಿ ಸಶಸ್ತ್ರೀಕರಣ ಮಾಡಿ, ಸಮೃದ್ಧ ಪ್ರದೇಶಗಳನ್ನು ಪ್ರತಿಕೂಲ ಸ್ಥಳಗಳಾಗಿ ಪರಿವರ್ತಿಸಲಾಗಿದೆ ಎಂದು ಗ್ರೀಸ್‌ ಮಾಜಿ ಸಂಸದ ಕಾನ್‌ಸ್ಟ್ಯಾಂಟಿನ್‌ ಬೊಗ್ದಾನೊಸ್‌ ತೀವ್ರ ಟೀಕಾಪ್ರಹಾರ ಮಾಡಿದ್ದಾರೆ.

ತಮ್ಮ ದೇಶದಲ್ಲಿನ ಉತ್ತರ ಸೈಪ್ರಸ್‌ನ ಪರಿಸ್ಥಿತಿ ಉಲ್ಲೇಖಿಸಿ ಅವರು, ದಬ್ಬಾಳಿಕೆಯ ವಿರುದ್ಧ ಅಲ್ಲಿನ ಜನರು ಹೋರಾಡುತ್ತಿದ್ದಾರೆ. ಪಿಒಕೆಯಲ್ಲಿ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ರಾಜಕಾರಣಿಗಳು ಗಮನ ಹರಿಸುವ ಅಗತ್ಯವಿದೆ. ಭೌಗೋಳಿಕವಾಗಿ ತಮ್ಮ ದೇಶಗಳ ಗಡಿಗಳಿಗೆ ದೂರವಿದ್ದರೂ ಯುರೋಪಿನ ನಾಗರಿಕರು ಇಲ್ಲಿನವರ ಸಮಸ್ಯೆಗಳತ್ತ ಕಳಕಳಿ ತೋರಬೇಕು ಎಂದು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ.

ಈ ಭಾಗದಲ್ಲಿ ದಬ್ಬಾಳಿಕೆಯ ವಿರುದ್ಧ ಶಾಂತಿಯುತ ಪ್ರತಿರೋಧ ತೋರುತ್ತಿರುವುದನ್ನು ಸಮರ್ಥಿಸಿಕೊಂಡ ಲೇಖಕ ಹಂಫ್ರೆ ಹಾಕ್‌ಸ್ಲೆ, ದುರಂತ ತಪ್ಪಿಸುವ ಏಕೈಕ ತಂತ್ರವೆಂದರೆ ಈ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದಾಗಿದೆ ಎಂದು ಪ್ರತಿಪಾದಿಸಿದರು.

‘ಪಾಕಿಸ್ತಾನ ಬ್ಲ್ಯಾಕ್‌ಮೇಲ್‌ ಮಾಡುತ್ತಿದೆ’

ಪಾಕಿಸ್ತಾನ ಮತ್ತು ಚೀನಾದ ನಡುವಿನ ವ್ಯಾಪಾರ ಸಂಬಂಧಗಳಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಮಹತ್ವ ಪಡೆದಿದೆ. ಈ ಪ್ರದೇಶ ಸಮೃದ್ಧವಾಗಿದ್ದರೂ ಇಲ್ಲಿನ ಜನರು ಶಿಕ್ಷಣವಿಲ್ಲದೆ ಬಡತನದಲ್ಲಿ ಬೇಯುತ್ತಿದ್ದಾರೆ. ಇಲ್ಲಿನವರಿಗೆ ವೈದ್ಯಕೀಯ ಮೂಲಸೌಕರ್ಯಗಳು ಮತ್ತು ಆಹಾರ ಭದ್ರತೆಯನ್ನು ಪಾಕಿಸ್ತಾನಿ ಸರ್ಕಾರಕ್‌ಮೇಲ್‌ ಸಾಧನಗಳಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ನಿವಾಸಿ ಸೆಂಗೆ ಸೆರಿಂಗ್‌ ವಾಸ್ತವ ಸ್ಥಿತಿ ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT