ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿ ಸಹಿಸಲ್ಲ: ಪಾಕ್ ನ್ಯಾಯಮೂರ್ತಿ ಖಾಜಿ ಫಯೆಜ್

Published 3 ಏಪ್ರಿಲ್ 2024, 14:07 IST
Last Updated 3 ಏಪ್ರಿಲ್ 2024, 14:07 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ಸಹಿಸಲಾಗದು ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಖಾಜಿ ಫಯೆಜ್‌ ಐಸಾ ಬುಧವಾರ ಹೇಳಿದ್ದಾರೆ.  

ಗುಪ್ತಚರ ಸಂಸ್ಥೆಗಳು ನ್ಯಾಯಾಂಗದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎನ್ನುವ ಆರೋಪದ ವಿಚಾರಣೆಯನ್ನು ಪೂರ್ಣ ಪೀಠಕ್ಕೆ ವಹಿಸಿದ ಅವರು, ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ಯಾವುದೇ ದಾಳಿಯನ್ನು ತಡೆಯುವುದಾಗಿ ಪ್ರತಿಜ್ಞೆ ಕೂಡ ಮಾಡಿದರು. 

ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದ ಮುಖ್ಯ ನ್ಯಾಯಮೂರ್ತಿ, ‘ಮುಂದಿನ ವಿಚಾರಣೆಗೆ ನಾವು ಪೂರ್ಣ ಪೀಠ ರಚಿಸುತ್ತೇವೆ. ಈ ಪ್ರಕರಣದ ವಾದವನ್ನು ನಾವು ಪ್ರತಿದಿನ ಆಲಿಸುತ್ತೇವೆ’ ಎಂದರು.

ವಿಚಾರಣೆಯ ವೇಳೆ ಅಟಾರ್ನಿ ಜನರಲ್ ಮನ್ಸೂರ್ ಅವಾನ್ ಅವರು, ಸರ್ಕಾರವು ತನಿಖೆಗೆ ಆಯೋಗ ರಚಿಸಿದೆ. ಆದರೆ, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ವಕೀಲರಿಂದ ವಾಗ್ದಾಳಿಗೆ ಗುರಿಯಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಗುಪ್ತಚರ ಸಂಸ್ಥೆಗಳ ಹಸ್ತಕ್ಷೇಪದ ಕುರಿತು ಇಸ್ಲಾಮಾಬಾದ್ ಹೈಕೋರ್ಟ್‌ನ (ಐಎಚ್‌ಸಿ) ಆರು ನ್ಯಾಯಮೂರ್ತಿಗಳು ಮಾಡಿರುವ ಗಂಭೀರ ಆರೋಪದ ತನಿಖೆಗಾಗಿ ಸರ್ಕಾರ ರಚಿಸಿದ್ದ ಏಕವ್ಯಕ್ತಿ ತನಿಖಾ ಆಯೋಗದ ನೇತೃತ್ವದಿಂದ ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ತಸ್ಸಾದಕ್ ಹುಸೇನ್ ಜಿಲಾನಿ ಅವರು ಹಿಂದೆ ಸರಿದ ನಂತರ, ಸುಪ್ರೀಂ ಕೋರ್ಟ್‌ ಈ ಕ್ರಮಕೈಗೊಂಡಿದೆ.

ಗುಪ್ತಚರ ಸಂಸ್ಥೆಗಳ ಹಸ್ತಕ್ಷೇಪದ ಬಗ್ಗೆ ಆರು ನ್ಯಾಯಮೂರ್ತಿಗಳು ಬರೆದ ಪತ್ರ ಆಧರಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಐಸಾ ಅವರ ನೇತೃತ್ವದ ಏಳು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT