ಢಾಕಾ: ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ, ಆದರೆ ಅನೇಕ ಸವಾಲುಗಳಿವೆ. ಹಲವು ಸುಧಾರಣೆಗಳ ನಂತರ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲಾಗುವುದು ಎಂದು ಮಧ್ಯಂತರ ಸರ್ಕಾರದ ಪತ್ರಿಕಾ ಕಾರ್ಯದರ್ಶಿ ಶಫೀಖುಲ್ ಆಲಂ ತಿಳಿಸಿದ್ದಾರೆ.
ಬಾಂಗ್ಲಾದ ವಿದೇಶಾಂಗ ಸೇವಾ ಅಕಾಡೆಮಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವುದು ಮೊದಲ ಆದ್ಯತೆಯಾಗಿದೆ. ಶೀಘ್ರದಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ನೇಮಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಅಡಿಯಲ್ಲಿ ಎಲ್ಲಾ 50 ಪೊಲೀಸ್ ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ ಎಂದರು. ಇದೇ ವೇಳೆ ಬಾಂಗ್ಲಾದ ಸದ್ಯದ ಪರಿಸ್ಥಿತಿಯ ಬಗ್ಗೆ ಪಶ್ನಿಸಿದಾಗ, ‘ನೀವು ಢಾಕಾ ಅಥವಾ ಕೈಗಾರಿಕಾ ಪ್ರದೇಶದ ಹೊರಗಿನ ಗ್ರಾಮೀಣ ಪ್ರದೇಶಗಳು ಅಥವಾ ನಗರದ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ಪರಿಸ್ಥಿತಿಯನ್ನು ನೀವೇ ನೋಡಿ, ಸಾಮಾನ್ಯವಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾಣಬಹುದು’ ಎಂದು ಉತ್ತರಿಸಿದರು.