ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ಗೆ ಬೆಂಬಲ: ಅಮೆರಿಕ ಅಧ್ಯಕ್ಷ ಬೈಡನ್ ಭರವಸೆ

Published 30 ಮಾರ್ಚ್ 2024, 4:51 IST
Last Updated 30 ಮಾರ್ಚ್ 2024, 4:51 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜೋ ಬೈಡನ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಪಾಕ್‌ ಪ್ರಧಾನಿಯೊಂದಿಗೆ ಇದೇ ಮೊದಲ ಬಾರಿಗೆ ಅಧಿಕೃತ ಸಂವಹನ ನಡೆಸಿದ್ದಾರೆ. ನಾಯಕರು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ಶಾಂತಿ ಮತ್ತು ಭದ್ರತೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

2021ರ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೈಡನ್ ಅವರು ಆಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೂ ಮಾತುಕತೆ ನಡೆಸಿರಲಿಲ್ಲ. ಬಳಿಕ 2022ರ ಏಪ್ರಿಲ್‌ನಲ್ಲಿ ಇಮ್ರಾನ್ ಬಳಿಕ ಪ್ರಧಾನಿ ಹುದ್ದೆಗೇರಿದ ಷರೀಫ್ ಜತೆಯೂ ಯಾವುದೇ ಮಾತುಕತೆ ನಡೆಸಿರಲಿಲ್ಲ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

2022ರಲ್ಲಿ ಅವಿಶ್ವಾಸ ಮತಯಾಚನೆ ಮೂಲಕ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್‌ (ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್‌ ಖಾನ್‌ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಲಾಯಿತು. ಕಳೆದ ತಿಂಗಳು (ಫೆಬ್ರುವರಿ) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿದ್ದವು.

ಬಳಿಕ ಸಮ್ಮಿಶ್ರ ಸರ್ಕಾರ ರಚನೆಗೆ ಪಾಕಿಸ್ತಾನ ಮುಸ್ಲೀಂ ಲೀಗ್–ನವಾಜ್‌ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮೈತ್ರಿ ಮಾಡಿಕೊಂಡಿದ್ದು, ಪ್ರಧಾನಿ ಸ್ಥಾನಕ್ಕೆ ಶೆಹಬಾಜ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಹಿಂದೆ 2022ರ ಏಪ್ರಿಲ್‌ನಿಂದ 2023ರ ಆಗಸ್ಟ್‌ವರೆಗೆ ಪ್ರಧಾನಿಯಾಗಿದ್ದರು.

336 ಸದಸ್ಯ ಬಲದ ಸಂಸತ್ತಿನಲ್ಲಿ ಮೈತ್ರಿಕೂಟವು ಒಟ್ಟು 201 ಸದಸ್ಯರ ಬಲ ಹೊಂದಿದೆ. ಇವರಿಗೆ ಸ್ಪರ್ಧಿಯಾಗಿದ್ದ ಒಮರ್ ಅಯೂಬ್‌ ಖಾನ್ ಮತ್ತು ಈಗ ಜೈಲಿನಲ್ಲಿರುವ, ಪಿಟಿಐ ಪಕ್ಷದ ನಾಯಕ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಒಟ್ಟಾಗಿ 92 ಸದಸ್ಯರ ಬಲವನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT