ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆ ಪೂರ್ಣವಾಗುವವರೆಗೂ ಹಡಗಿನಲ್ಲೇ ಭಾರತೀಯ ಸಿಬ್ಬಂದಿ: ಮರೈನ್ ವಕ್ತಾರ

Published 2 ಏಪ್ರಿಲ್ 2024, 13:54 IST
Last Updated 2 ಏಪ್ರಿಲ್ 2024, 13:54 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಕಳೆದ ವಾರ ಬಾಲ್ಟಿಮೋರ್‌ನ ಪ್ರಮುಖ ಸೇತುವೆಗೆ ಡಿಕ್ಕಿ ಹೊಡೆದ ಸರಕು ಸಾಗಣೆ ಹಡಗು ಡಾಲಿಯಲ್ಲಿರುವ 20 ಭಾರತೀಯರು ಮತ್ತು ಶ್ರೀಲಂಕಾದ ಸಿಬ್ಬಂದಿ ತಮ್ಮ ದೈನಂದಿನ ಕರ್ತವ್ಯಗಳಲ್ಲಿ ನಿರತರಾಗಿದ್ದಾರೆ. ಈ ಅಪಘಾತದ ತನಿಖೆ ಪೂರ್ಣವಾಗುವವರೆಗೂ ಇವರೆಲ್ಲರೂ ಈ ಹಡಗಿನಲ್ಲಿಯೇ ಇರಲಿದ್ದಾರೆ.

‘ಹಡಗಿನಲ್ಲಿ 21 ಸಿಬ್ಬಂದಿ ಇದ್ದಾರೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಕೋಸ್ಟ್ ಗಾರ್ಡ್ ತನಿಖಾಧಿಕಾರಿಗಳಿಗೆ ನೆರವಾಗುತ್ತಿದ್ದಾರೆ’ ಎಂದು ಗ್ರೇಸ್ ಓಷನ್ ಪಿಟಿಇ ಮತ್ತು ಸಿನರ್ಜಿ ಮರೈನ್ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದರು.

ಬಾಲ್ಟಿಮೋರ್‌ನ ಪಟಾಪ್‌ಸ್ಕೋ ನದಿಗೆ ನಿರ್ಮಿಸಿರುವ 2.6 ಕಿ.ಮೀ. ಉದ್ದದ ನಾಲ್ಕು ಪಥದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಮಾರ್ಚ್ 26ರ ನಸುಕಿನಲ್ಲಿ ಡಾಲಿ ಹಡಗು ಡಿಕ್ಕಿ ಹೊಡೆದಿತ್ತು. ಈ ಹಡಗು ಶ್ರೀಲಂಕಾದ ಕೊಲಂಬೊಕ್ಕೆ ಹೊರಟಿತ್ತು.

‘ಈ ಸಮಯದಲ್ಲಿ, ತನಿಖೆ ಪ್ರಕ್ರಿಯೆಯು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಮಗೆ ತಿಳಿದಿಲ್ಲ. ಆ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಸಿಬ್ಬಂದಿ ಹಡಗಿನಲ್ಲೇ ಇರಲಿದ್ದಾರೆ’ ಎಂದು ವಕ್ತಾರರು ಪ್ರತಿಕ್ರಿಯಿಸಿದ್ದಾರೆ. 

ಡಾಲಿಯಲ್ಲಿರುವ 20 ಭಾರತೀಯ ಸಿಬ್ಬಂದಿಯ ಸುರಕ್ಷತೆಗಾಗಿ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

ಸಿಂಗಪುರ ಧ್ವಜ ಹೊಂದಿರುವ ಡಾಲಿ ಹಡಗು ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ. ಇದನ್ನು ಸಿನರ್ಜಿ ಮೆರೈನ್ ಗ್ರೂಪ್ ನಿರ್ವಹಿಸುತ್ತಿದೆ. 

‘ಹಡಗಿನಲ್ಲಿರುವ ಅಪಾಯಕಾರಿ ವಸ್ತುಗಳ ಅರಿವಿಲ್ಲ’

ಕೊಲಂಬೊ: ‘ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಸರಕು ಸಾಗಣೆ ಹಡಗಿನಲ್ಲಿ ಸಾಗಿಸುತ್ತಿರುವ ಅಪಾಯಕಾರಿ ವಸ್ತುಗಳ ಸ್ವರೂಪದ ಬಗ್ಗೆ ಶ್ರೀಲಂಕಾಗೆ ಯಾವುದೇ ಮಾಹಿತಿ ಇಲ್ಲ. ಹಡಗು ಕೊಲಂಬೊ ಬಂದರು ತಲುಪುವ 72 ಗಂಟೆಗಳ ಮೊದಲು ಕಂಟೈನರ್‌ಗಳಲ್ಲಿ ಏನಿದೆ ಎಂಬುದನ್ನು ತಿಳಿಸಬೇಕಿದೆ’ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.  ಅಮೆರಿಕ ಮಾಧ್ಯಮಗಳು ವರದಿ ಮಾಡಿರುವಂತೆ ಸೇತುವೆಗೆ ಡಿಕ್ಕಿ ಹೊಡೆದಿರುವ ಈ ಹಡಗಿನಲ್ಲಿ 764 ಟನ್ ಅಪಾಯಕಾರಿ ವಸ್ತುಗಳಿವೆ. ‘ಹಡಗು ಇಲ್ಲಿಗೆ ಏಪ್ರಿಲ್ 21ರಂದು ಬರಲಿದೆ. ಏಪ್ರಿಲ್ 17ರ ಒಳಗೆ ನಮಗೆ ಮಾಹಿತಿ ನೀಡಬೇಕು. ಅದಕ್ಕೆ ಸಾಕಷ್ಟು ಸಮಯವಿದೆ. ಅಪಾಯಕಾರಿ ವಸ್ತುಗಳನ್ನು ಹೊಂದಿರುವ ಕಂಟೈನರ್‌ಗಳಿದ್ದರೆ ನಿಯಮಾನುಸಾರ ಅಂತಹ ಕಂಟೈನರ್‌ಗಳನ್ನು ಪ್ರತ್ಯೇಕಿಸುತ್ತೇವೆ. ಪ್ರಮುಖ ಟ್ರಾನ್ಸ್‌ಶಿಪ್‌ಮೆಂಟ್ ಕೇಂದ್ರವಾಗಿ ಅಂತಹ ಕಂಟೈನರ್‌ಗಳ ನಿಭಾಯಿಸಲು ಕಾರ್ಯವಿಧಾನವನ್ನು ನಾವು ಹೊಂದಿದ್ದೇವೆ’ ಎಂದು ಶ್ರೀಲಂಕಾ ಬಂದರು ಪ್ರಾಧಿಕಾರದ (ಎಸ್‌ಎಲ್‌ಪಿಎ) ಅಧ್ಯಕ್ಷ ಕೀತ್ ಬರ್ನಾರ್ಡ್ ಹೇಳಿದರು. ‘ಹಡಗು ಅಪಾಯಕಾರಿ ತ್ಯಾಜ್ಯ ಅಥವಾ ವಿಷಕಾರಿ ವಸ್ತುಗಳನ್ನು ಸಾಗಿಸುತ್ತಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಅಂತಹ ತ್ಯಾಜ್ಯವಿದ್ದರೆ ಅದನ್ನು ದೇಶದೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ’ ಎಂದು   ಕೇಂದ್ರ ಪರಿಸರ ಪ್ರಾಧಿಕಾರದ (ಸಿಇಎ) ಉಪ ನಿರ್ದೇಶಕ ಅಜಿತ್ ವಿಜೆಸುಂದರ ಹೇಳಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ ಇಂಟರ್‌ನ್ಯಾಷನಲ್‌ ಮ್ಯಾರಿಟೈಮ್ ಡೇಂಜರಸ್ ಗೂಡ್ಸ್ ಕೋಡ್ ಅಡಿಯಲ್ಲಿ ವರ್ಗೀಕರಿಸಿರುವ ವಿಷಕಾರಿ ವಸ್ತುಗಳ 57 ಕಂಟೇನರ್‌ಗಳು ಈ ಹಡಗಿನಲ್ಲಿವೆ. 56 ಕಂಟೈನರ್‌ಗಳಲ್ಲಿ ನಿರುಪಯುಕ್ತ ಸ್ಫೋಟಕಗಳು ಮತ್ತು ಲೀಥಿಯಂ ಅಯಾನ್‌ ಬ್ಯಾಟರಿಗಳು ಸೇರಿದಂತೆ ವಿವಿಧ ಅಪಾಯಕಾರಿ ವಸ್ತುಗಳ ತ್ಯಾಜ್ಯಗಳಿವೆ. ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಈ ಹಡಗಿನ ಇತರ 4644 ಕಂಟೈನರ್‌ಗಳಲ್ಲಿರುವ ತ್ಯಾಜ್ಯ ಮತ್ತು ವಸ್ತುಗಳ ಬಗ್ಗೆ ವಿಶ್ಲೇಷಿಸುತ್ತಿದೆ ಎಂದು ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ ‘ಡೈಲಿ ಮಿರರ್’ ಆನ್‌ಲೈನ್‌ನಲ್ಲಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT