ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಿಚಿತ್ರಗಳ ತಾರೆ ಜೊತೆಗಿನ ಕೇಸ್: ಡೋನಾಲ್ಡ್ ಟ್ರಂಪ್ ತಪ್ಪಿತಸ್ಥ

ನ್ಯೂಯಾರ್ಕ್‌ನ ಮ್ಯಾನಹಟನ್ ನ್ಯಾಯಾಲಯದ 11 ನ್ಯಾಯಾಧೀಶರ ಸಮಿತಿಯು ಗುರುವಾರ ಸರ್ವಾನುಮತದಿಂದ ಈ ತೀರ್ಪು ನೀಡಿದೆ.
Published 31 ಮೇ 2024, 7:34 IST
Last Updated 31 ಮೇ 2024, 7:34 IST
ಅಕ್ಷರ ಗಾತ್ರ

ನ್ಯೂಯಾರ್ಕ್‌, ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಉಮೇದುವಾರ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಕಂಪನಿಯ ಲೆಕ್ಕಪತ್ರಗಳನ್ನು ತಿರುಚಿ ವಂಚಿಸಿದ್ದಾರೆ ಎಂದು ನ್ಯೂಯಾರ್ಕ್‌ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ಸಂಬಂಧಿತ ಪ್ರಕರಣದಲ್ಲಿ ಶಿಕ್ಷೆಯನ್ನು ಇದೇ ಜುಲೈ 11ರಂದು ಘೋಷಿಸುವುದಾಗಿ ನ್ಯಾಯಾಲಯ ಹೇಳಿದೆ.

ಆದರೆ ಅಧ್ಯಕ್ಷೀಯ ಚುನಾವಣೆಯ ಮೇಲೆ ಇದು ಬೀರುವ ಪರಿಣಾಮ ಅತ್ಯಲ್ಪ ಎಂದು ತಜ್ಞರು ಹೇಳಿದ್ದಾರೆ. ನೀಲಿಚಿತ್ರ ತಾರೆಯೊಬ್ಬರಿಗೆ ನೀಡಿದ್ದ ಹಣವನ್ನು, ಟ್ರಂಪ್‌ ಅವರ ನಿರ್ಮಾಣ ಕಂಪನಿ ‘ಟ್ರಂಪ್‌ ಟವರ್ಸ್‌’ನ ಲೆಕ್ಕಪತ್ರದಲ್ಲಿ ‘ಕಾನೂನು ಸೇವಾ ಶುಲ್ಕ’ ಎಂದು ನಮೂದಿಸಲಾಗಿತ್ತು. ಈ ಸಂಬಂಧ ಟ್ರಂಪ್‌ ವಿರುದ್ಧ ಒಟ್ಟು 34 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆ ಎಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ಟ್ರಂಪ್‌ ಅವರು ತಪ್ಪಿತಸ್ಥ ಎಂದು ನ್ಯೂಯಾರ್ಕ್‌ ನ್ಯಾಯಾಲಯ ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಟ್ರಂಪ್‌ ಅವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗುವ ಸಾಧ್ಯತೆ ಇದೆ. ಇಂತಹ ಪ್ರಕರಣದಲ್ಲಿ ಗರಿಷ್ಠ ನಾಲ್ಕು ವರ್ಷಗಳ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ. ಜುಲೈನಲ್ಲಿ ಶಿಕ್ಷೆ ಪ್ರಕಟವಾದರೆ, ಅದು ಟ್ರಂಪ್‌ ಅವರ ಉಮೇದುವಾರಿಕೆಗೆ ತಡೆಯಾಗಬಹುದು. ಹೀಗಾಗಿ ಶಿಕ್ಷೆ ಪ್ರಕಟವಾಗುವುದಕ್ಕೆ ತಡೆ ನೀಡಿ ಎಂದು ಟ್ರಂಪ್‌ ಅವರು ಫೆಡರಲ್‌ ನ್ಯಾಯಾಲಯದ ಮೊರೆ ಹೋಗಬಹುದು. ಈ ಪ್ರಕರಣದಲ್ಲಿ ಟ್ರಂಪ್‌ ಅವರು ತಾನು ನಿರ್ದೋಷಿ ಎಂದೇ ಪ್ರತಿಪಾದಿಸುತ್ತಿರುವ ಕಾರಣ, ಫೆಡರಲ್‌ ನ್ಯಾಯಾಲಯವು ಶಿಕ್ಷೆ ಪ್ರಕಟಿಸುವುದನ್ನು ಮುಂದೂಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

ಅಧ್ಯಕ್ಷೀಯ ಹುದ್ದೆಗೆ ಜುಲೈ ಎರಡನೇ ವಾರದಲ್ಲಿ ಅಧಿಕೃತವಾಗಿ ಅಭ್ಯರ್ಥಿಯ ನಾಮನಿರ್ದೇಶನವಾಗಲಿದೆ. ಆದರೆ ಟ್ರಂಪ್‌ ಅವರು ತಮ್ಮ ಪಕ್ಷದ ಇತರರನ್ನು ಈ ಉಮೇದುವಾರಿಕೆಯಲ್ಲಿ ಈಗಾಗಲೇ ಹಿಂದಿಕ್ಕಿದ್ದಾರೆ. ಟ್ರಂಪ್‌ ಅವರೇ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಎಂಬ ಅಧಿಕೃತ ಘೋಷಣೆ ಅಷ್ಟೇ ಉಳಿದಿದೆ. ಹೀಗಾಗಿ ಅವರು ಚುನಾವಣೆಯಿಂದ ಹಿಂದೆ ಸರಿಯುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಲಾಗಿದೆ. ಆದರೆ, ಟ್ರಂಪ್‌ ಅವರು ನವೆಂಬರ್ 5ರಂದು ನಡೆಯುವ ಚುನಾವಣೆಯಲ್ಲಿ ಗೆದ್ದ ನಂತರ, ಶಿಕ್ಷೆ ಪ್ರಕಟವಾದರೆ ಏನಾಗುತ್ತದೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ.

ಬೆಂಬಲ ಭರಪೂರ: ರಾಜಕೀಯವಾಗಿ ಮುಗಿಸಲು ಲೆಕ್ಕಪತ್ರ ತಿರುಚಿದ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ಟ್ರಂಪ್‌ ಅವರು ಹಲವು ತಿಂಗಳಿಂದ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಈ ವಿಷಯವನ್ನು ಚುನಾವಣೆಯಲ್ಲಿ ತಮ್ಮ ಪರವಾಗಿ ಬಳಸಿಕೊಳ್ಳಲು ಟ್ರಂಪ್‌ ತಂತ್ರ ರೂಪಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಟ್ರಂಪ್‌ ಅವರು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ, ದೇಣಿಗೆ ಸಂಗ್ರಹದಲ್ಲಿ ಅವರ ಪರವಾದ ಅಲೆ ಎದ್ದಿದೆ. 

‘ತೀರ್ಪು ಪ್ರಕಟವಾದ ಗುರುವಾರದಂದಜು ಟ್ರಂಪ್‌ ಚುನಾವಣಾ ಪ್ರಚಾರಕ್ಕೆ ಸಾರ್ವಜನಿಕರು 3.5 ಕೋಟಿ ಡಾಲರ್‌ ದೇಣಿಗೆ ನೀಡಿದ್ದಾರೆ. ಇದು, ಈ ಚುನಾವಣೆಯಲ್ಲಿ ಈವರೆಗೆ ಟ್ರಂಪ್‌ ಪರವಾಗಿ ದಿನವೊಂದರಲ್ಲಿ ಸಂಗ್ರಹವಾದ ಗರಿಷ್ಠ ದೇಣಿಗೆ. ಜಾಗತಿಕ ಮಟ್ಟದಲ್ಲೂ ಟ್ರಂಪ್‌ ವಿರುದ್ಧ ಯಾವ ನಾಯಕರೂ ಹೇಳಿಕೆ ನೀಡಿಲ್ಲ. ಟ್ರಂಪ್‌ ಮತ್ತೆ ಅಧ್ಯಕ್ಷರಾದರೆ ಅವರೊಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಸಂಬಂಧ ಕೆಡಿಸಿಕೊಳ್ಳಲು ಯಾರೂ ಸಿದ್ಧರಿಲ್ಲ’ ಎಂದು ಟ್ರಂಪ್‌ ಅವರ ಪ್ರಚಾರ ಸಿಬ್ಬಂದಿ ಹೇಳಿದ್ದಾರೆ.

ಪ್ರಕರಣವೇನು...

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ರಿಪಬ್ಲಿಕನ್‌ ಪಕ್ಷವನ್ನು ಪ್ರತಿನಿಧಿಸಿ ಗೆದ್ದಿದ್ದರು. ಆದರೆ ಚುನಾವಣೆಗೂ ಹಲವು ತಿಂಗಳ ಮೊದಲು ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ ಅವರಿಗೆ ಟ್ರಂಪ್‌ ಅವರ ಕಂಪನಿಯ ಖಾತೆಯಿಂದ 1.30 ಲಕ್ಷ ಡಾಲರ್‌ ಮೊತ್ತವನ್ನು ವರ್ಗಾಯಿಸಲಾಗಿತ್ತು.

ಟ್ರಂಪ್‌ ಮತ್ತು ಡೇನಿಯಲ್ಸ್‌ 2006ರ ಸಂದರ್ಭದಲ್ಲಿ ಪರಸ್ಪರ ವೈಯಕ್ತಿಕ ಸಂಬಂಧದಲ್ಲಿ ಇದ್ದರು. 2016ರ ಚುನಾವಣೆ ವೇಳೆ ಡೇನಿಯಲ್ಸ್‌ ಈ ಬಗ್ಗೆ ಮಾತನಾಡುವುದನ್ನು ತಡೆಯಲು ಅವರಿಗೆ ಹಣ ನೀಡಲಾಗಿತ್ತು. ಪ್ರಚಾರಕ್ಕಾಗಿ ಸಂಗ್ರಹಿಸಲಾದ ದೇಣಿಗೆ ಹಣವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿತ್ತು. ಕಂಪನಿ ಲೆಕ್ಕಪತ್ರದಲ್ಲಿ ಅದನ್ನು ಬೇರೆ ರೂಪದಲ್ಲಿ ತೋರಿಸಲಾಗಿತ್ತು. ಈ ಮೂಲಕ ಟ್ರಂಪ್ ಹಲವು ವಂಚನೆ ಎಸಗಿದ್ದಾರೆ ಎಂಬುದು ಅವರ ವಿರುದ್ಧ ಇದ್ದ ಪ್ರಮುಖ ಆರೋಪಗಳು.

ಈ ಆರೋಪಗಳನ್ನು ಟ್ರಂಪ್‌ ನಿರಾಕರಿಸಿದ್ದರು. ಆದರೆ ಆ ಹಣವನ್ನು ಡೇನಿಯಲ್ಸ್‌ ಅವರ ಖಾತೆಗೆ ವರ್ಗಾಯಿಸಿದ್ದ ಟ್ರಂಪ್‌ ಅವರ ಆಗಿನ ಆಪ್ತ ಸಹಾಯಕ ಮೈಕಲ್‌ ಕೋಹೆನ್‌ ಅವರೇ ನ್ಯಾಯಾಲಯದಲ್ಲಿ ಟ್ರಂಪ್‌ ವಿರುದ್ಧ ಸಾಕ್ಷ್ಯ ಹೇಳಿದ್ದರು.

‘ಡೇನಿಯಲ್ಸ್‌ಗೆ ಹಣ ನೀಡಿ ಆಕೆಯ ಬಾಯಿಮುಚ್ಚಿಸು. ‘ಲೆಕ್ಕಪತ್ರದಲ್ಲಿ ಅದನ್ನು ಕಾನೂನು ಸೇವಾ ಶುಲ್ಕ ಎಂದು ತೋರಿಸು’ ಎಂದು ಟ್ರಂಪ್‌ ತನಗೆ ಸೂಚಿಸಿದ್ದರು ಎಂದು ಕೊಹೆನ್‌ ನ್ಯಾಯಾಲಯದ ಎದುರು ಹೇಳಿದ್ದರು. ಆ ಸಾಕ್ಷ್ಯದ ಆಧಾರದ ಮೇಲೆಯೇ ನ್ಯಾಯಾಲಯವು ತೀರ್ಪು ನೀಡಿದೆ.

ಈ ಪ್ರಕರಣದ ಹೊರತಾಗಿ ಟ್ರಂಪ್‌ ವಿರುದ್ಧ 2020ರ ಚುನಾವಣೆಯ ತೀರ್ಪನ್ನು ರದ್ದು‍ಪಡಿಸಲು ಸಂಚು ರೂಪಿಸಿದ ಮತ್ತು ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಇನ್ನೂ ಮೂರು ಪ್ರಕರಣಗಳು ಇವೆ. ಆದರೆ ಅವುಗಳ ವಿಚಾರಣೆ 2025ಕ್ಕೆ ನಿಗದಿಯಾಗಿರುವ ಕಾರಣ ಚುನಾವಣೆ ಮೇಲೆ ಅವು ಪ್ರಭಾವ ಬೀರುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT