ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟಿಯಲ್ಲಿ ತೀವ್ರ ಭೂಕಂಪನ: ಸತ್ತವರ ಸಂಖ್ಯೆ 1,279

Last Updated 16 ಆಗಸ್ಟ್ 2021, 11:45 IST
ಅಕ್ಷರ ಗಾತ್ರ

ಲೆಸ್ ಕೆಯೆಸ್‌, ಹೈಟಿ: ಹೈಟಿಯಲ್ಲಿ ಭಾನುವಾರ ತೀವ್ರ ಭೂಕಂಪನ ಸಂಭವಿಸಿದ್ದು, ಸುಮಾರು 1,297 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, 5,700 ಮಂದಿ ಗಾಯಗೊಂಡಿದ್ದು, ಅಸಂಖ್ಯ ಕುಟುಂಬಗಳು ಅತಂತ್ರವಾಗಿವೆ. ಹೈಟಿ ರಾಜಧಾನಿ ಪೋರ್ಟ್‌ –ಹೌ–ಪ್ರಿನ್ಸ್ ಪಶ್ಚಿಮಕ್ಕೆ 125 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರಸ್ಥಾನವಿದೆ.

ಭೂಕಂಪನದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 7.2ರಷ್ಟು ದಾಖಲಾಗಿದೆ. ‘ವಾತಾವರಣದಲ್ಲಿ ಏರುಪೇರು ನಿರೀಕ್ಷೆಯಿದೆ. ಸೋಮವಾರ ರಾತ್ರಿಯವರೆಗೆ ಬಿರುಗಾಳಿ, ಭಾರಿ ಮಳೆ, ಸಮುದ್ರದ ಅಬ್ಬರ ಸಾಧ್ಯತೆಯಿದೆ. ಭೂಕುಸಿತ ಮತ್ತು ಪ್ರವಾಹ ಸ್ಥಿತಿಯನ್ನು ತಳ್ಳಿಹಾಕಲಾಗದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ತೀವ್ರ ಭೂಕಂಪನದಿಂದಾಗಿ ಅಂದಾಜು 7000 ಮನೆಗಳು ಕುಸಿದಿವೆ. 5000ಕ್ಕೂ ಅಧಿಕ ಮನೆಗಳು ಜಖಂಗೊಂಡಿವೆ. ಆಸ್ಪತ್ರೆಗಳು, ಶಾಲಾ ಕಟ್ಟಡ, ಕಚೇರಿಗಳು, ಚರ್ಚ್‌ಗಳು ಕೂಡಾ ಕುಸಿದಿರುವ ಆಥವಾ ಜಖಂಗೊಂಡಿರುವ ಕಟ್ಟಡಗಳಲ್ಲಿ ಸೇರಿವೆ. ರಕ್ಷಣಾ ಕಾರ್ಯ ಚುರುಕಿನಿಂದ ಸಾಗಿದೆ.

ದ್ವೀಪರಾಷ್ಟ್ರ ಹೈಟಿ ಈಗಾಗಲೇ ಕಡು ಬಡತನ ಹಾಗೂ ಕೊರೊನಾ ಸೋಂಕು ಪಿಡುಗಿನಿಂದ ಬಳಲುತ್ತಿದೆ. ಜುಲೈ 7ರಂದು ನಡೆದಿದ್ದ ಹೈಟಿ ಅಧ್ಯಕ್ಷ ಜೊವೆನಿಲ್‌ ಮೊಯ್ಸ್‌ ಹತ್ಯೆಯ ನಂತರ ರಾಜಕೀಯ ಅನಿಶ್ಚಿತತೆಯೂ ಉದ್ಭವಿಸಿದೆ. ಈಗ ಇವುಗಳ ಜೊತೆಗೆ ಭೂಕಂಪನ ಆವರಿಸಿದ್ದು, ದೇಶದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಕುಸಿದ ಕಟ್ಟಡಗಳ ಅವಶೇಷಗಳ ತೆರವುಗೊಳಿಸುವಿಕೆ, ಅಳಿದುಳಿದ ವಸ್ತುಗಳ ನಿರತರಾದ ಕುಟುಂಬ ಸದಸ್ಯರು, ಬಯಲು ಪ್ರದೇಶದಲ್ಲಿ ರಾತ್ರಿಯಿಡೀ ಕಳೆಯಬೇಕಾದ ಅನಿವಾರ್ಯ ಸ್ಥಿತಿ, ಉಳಿದಿರುವ ಅಂಗಡಿಗಳಲ್ಲಿ ನೀರು, ಬಾಳೆಹಣ್ಣು ಖರೀದಿಗೆ ಸಾಲುಗಟ್ಟಿರುವ ಜನರು –ಸದ್ಯ ಹೈಟಿಯಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳಾಗಿವೆ.

ಯುನಿಸೆಫ್‌ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಟಾ ಅವರು, ಮಾನವೀಯತೆಯ ನೆರವು ಈಗಿನ ಅಗತ್ಯವಾಗಿದೆ. ಹೈಟಿ ಪ್ರಜೆಗಳಿಗೆ ತುರ್ತಾಗಿ ಆರೋಗ್ಯ ಚಿಕಿತ್ಸಕ ಪರಿಕರಗಳು, ಶುದ್ಧ ನೀರು, ಆಸರೆ ಅಗತ್ಯವಿದೆ. ಪೋಷಕರಿಂದ ಬೇರ್ಪಟ್ಟಿರುವ ಮಕ್ಕಳಿಗೆ ರಕ್ಷಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ಹಿಂದೆ 2010ರಲ್ಲಿ ಹೈಟಿ ಭೂಕಂಪನಕ್ಕೆ ತುತ್ತಾಗಿದ್ದು, ಹತ್ತಾರು ಸಾವಿರ ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT