ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ: ಬದ್ಧತೆ ವ್ಯಕ್ತಪಡಿಸಿದ ಅಮೆರಿಕ

Published 21 ಮೇ 2024, 11:29 IST
Last Updated 21 ಮೇ 2024, 11:29 IST
ಅಕ್ಷರ ಗಾತ್ರ

ವಾಷಿಂಗ್ಟನ್ (‍ಪಿಟಿಐ): ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯ ವಿಚಾರವಾಗಿ ಜೋ ಬೈಡನ್ ಆಡಳಿತವು ಅಪಾರವಾದ ಬದ್ಧತೆಯನ್ನು ಹೊಂದಿದೆ, ಎಲ್ಲ ಧರ್ಮಗಳಿಗೆ ಸೇರಿದ ಜನರನ್ನು ಸಮಾನವಾಗಿ ಕಾಣುವ ವಿಚಾರವಾಗಿ ಭಾರತ ಸೇರಿದಂತೆ ಹಲವು ದೇಶಗಳ ಜೊತೆ ತೊಡಗಿಸಿಕೊಂಡಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸೋಮವಾರ ತಿಳಿಸಿದ್ದಾರೆ.

ಭಾರತದಲ್ಲಿ ಮುಸ್ಲಿಂ ಸಮುದಾಯದವರು ತಮ್ಮ ಕುಟುಂಬದವರನ್ನು, ಮಕ್ಕಳನ್ನು ಭೀತಿ ಮತ್ತು ಅನಿಶ್ಚಿತ ಪರಿಸ್ಥಿತಿಯಲ್ಲಿ ಬೆಳೆಸುತ್ತಿದ್ದಾರೆ ಎಂಬ ಆರೋಪ ಇರುವ ಬರಹವೊಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಈ ಬರಹಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆಯಾಗಿ ಈ ಮಾತು ಆಡಿದ್ದಾರೆ. ‘ಈ ವಿಚಾರವಾಗಿ ನೀವು ಭಾರತದ ಅಧಿಕಾರಿಗಳ ಜೊತೆ ಮಾತನಾಡಿದ್ದೀರಾ’ ಎಂದು ಮಿಲ್ಲರ್ ಅವರನ್ನು ಪ್ರಶ್ನಿಸಲಾಗಿತ್ತು.

ವಾರಾಂತ್ಯದಲ್ಲಿ ಪ್ರಕಟವಾಗಿರುವ ಈ ಲೇಖನದಲ್ಲಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದಲ್ಲಿ ‘ಜಾತ್ಯತೀತ ರೂಪುರೇಷೆ ಹಾಗೂ ಗಟ್ಟಿ ಪ್ರಜಾತಂತ್ರವನ್ನು ಕುಗ್ಗಿಸಿದ್ದಾರೆ’ ಎಂದು ಆರೋಪಿಸಲಾಗಿದೆ. ಇಂತಹ ಆರೋಪಗಳು ತಪ್ಪು ಮಾಹಿತಿಯನ್ನು ಆಧರಿಸಿವೆ, ದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಹೀಗೆ ಹೇಳಲಾಗುತ್ತಿದೆ ಎಂದು ಭಾರತವು ಈ ಹಿಂದೆ ಪ್ರತಿಕ್ರಿಯಿಸಿತ್ತು.

ತಾವು ಅಲ್ಪಸಂಖ್ಯಾತರ ವಿರುದ್ಧ ಒಂದು ಮಾತನ್ನೂ ಯಾವತ್ತೂ ಆಡಿಲ್ಲ ಎಂದು ಮೋದಿ ಅವರು ಈಚೆಗೆ ಹೇಳಿದ್ದಾರೆ. ಬಿಜೆಪಿಯು ‘ಇಂದು ಮಾತ್ರವೇ ಅಲ್ಲ, ಯಾವತ್ತಿಗೂ ಕೂಡ’ ಅವರ ವಿರುದ್ಧ ಕೆಲಸ ಮಾಡಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT