ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ಖಶೋಗ್ಗಿ ಹತ್ಯೆ ಪೂರ್ವನಿಯೋಜಿತ ಕೃತ್ಯ: ಎರ್ಡೋಗನ್

Last Updated 23 ಅಕ್ಟೋಬರ್ 2018, 14:43 IST
ಅಕ್ಷರ ಗಾತ್ರ

ಅಂಕಾರ: ಪತ್ರಕರ್ತ ಖಶೋಗ್ಗಿ ಹತ್ಯೆಯು ಪೂರ್ವ ನಿಯೋಜಿತ ಕೃತ್ಯ ಎಂದುಟರ್ಕಿ ಅಧ್ಯಕ್ಷ ತಯೀಪ್ ಎರ್ಡೋಗನ್ ಹೇಳಿದ್ದಾರೆ. ‘ಹತ್ಯೆಯ ಮುನ್ನಾದಿನ ಸೌದಿ ಏಜೆಂಟ್‌ಗಳ ತಂಡ ಟರ್ಕಿಗೆ ಬಂದಿತ್ತು.ಸೌದಿ ಕಾನ್ಸಲೇಟ್ ಕಚೇರಿಯ ಎಲ್ಲ ಕ್ಯಾಮರಾಗಳನ್ನು ತೆಗೆಯಲಾಗಿತ್ತು’ ಎಂದು ಅವರು ಹೇಳಿದ್ದಾರೆ.

ಸಂಸತ್ತಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು,ಹತ್ಯೆಯಲ್ಲಿ ಭಾಗಿಯಾದವರ ಗುರುತನ್ನು ಸೌದಿ ರಾಜಮನೆತನವು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಹತ್ಯೆಯನ್ನು ಒಪ್ಪಿಕೊಳ್ಳುವ ಮೂಲಕ ಸೌದಿ ಅರೇಬಿಯಾ ಮಹತ್ವದ ಹೆಜ್ಜೆ ಇಟ್ಟಿದೆ. ಉನ್ನತ ಹುದ್ದೆಯಿಂದ ಹಿಡಿದು, ಕೆಳ ಹುದ್ದೆಯಲ್ಲಿರುವ ಯಾರೇ ಆಗಿದ್ದರೂ ಅವರನ್ನು ನ್ಯಾಯಾಂಗದ ಪರಿಧಿಗೆ ತರುವುದನ್ನು ನಾನು ಬಯಸುತ್ತೇನೆ’ ಎಂದು ಎರ್ಡೋಗನ್ ಹೇಳಿದ್ದಾರೆ.

ಹತ್ಯೆಯಲ್ಲಿ ಸೌದಿ ರಾಜಮನೆತನದ ಕೈವಾಡವಿದೆ ಎಂದು ಅಧಿಕಾರಿಗಳು ಹೇಳಿದ್ದರೂ, ಎರ್ಡೋಗನ್ ತಮ್ಮ ಭಾಷಣದಲ್ಲಿ ಯುವರಾಜ ಸಲ್ಮಾನ್ ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಲಿಲ್ಲ.

ತನಿಖೆಗೆ ಸಹಕಾರದ ಭರವಸೆ:

ಖಶೋಗ್ಗಿ ಹತ್ಯೆ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆಗಳು ಸ್ವತಂತ್ರ ತನಿಖೆಗೆ ಮುಂದಾದರೆ, ಅದಕ್ಕೆ ಸಹಕಾರ ನೀಡುವುದಾಗಿ ಸೌದಿ ಪ್ರಕಟಿಸಿದೆ.

ಸೌದಿ ನಡೆಗೆ ಟ್ರಂಪ್ ಕಿಡಿ

(ವಾಷಿಂಗ್ಟನ್ ವರದಿ): ಖಶೋಗ್ಗಿ ಹತ್ಯೆ ವಿಚಾರದಲ್ಲಿ ಸೌದಿ ಅರೇಬಿಯಾದ ನಡೆ ಸರಿಯಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ತನಿಖಾ ತಂಡಗಳು ಈಗಾಗಲೇ ಸೌದಿ ಹಾಗೂ ಟರ್ಕಿಯಲ್ಲಿದ್ದು, ಮಾಹಿತಿ ಕಲೆಹಾಕುತ್ತಿವೆ ಎಂದಿದ್ದಾರೆ. ತಂಡದಲ್ಲಿ ಚಾಣಾಕ್ಷ ವ್ಯಕ್ತಿಗಳಿದ್ದು, ಅವರು ಮಾಹಿತಿಯನ್ನು ಹೆಕ್ಕಿ ತರಲಿದ್ದಾರೆ ಎಂದು ಹೇಳಿದ್ದಾರೆ.

ಖಶೋಗ್ಗಿ ಅವರ ರೀತಿಯ ಹತ್ಯೆ ಮುಂದೆ ಎಂದೂ ನಡೆಯಬಾರದು ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಅದೆಲ್ ಅಲ್ ಜುಬೇರ್ ಹೇಳಿದ್ದಾರೆ. ಸರ್ಕಾರವು ಕಟ್ಟುನಿಟ್ಟಿನ ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT