ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್‌ ಮೇಲಿನ ದಾಳಿ ಅಗತ್ಯವಾಗಿತ್ತು: ಹಮಾಸ್

Published 21 ಜನವರಿ 2024, 19:09 IST
Last Updated 21 ಜನವರಿ 2024, 19:09 IST
ಅಕ್ಷರ ಗಾತ್ರ

ಗಾಜಾ ಪಟ್ಟಿ: ಪ್ಯಾಲೆಸ್ಟೀನ್‌ಗೆ ಸೇರಿದ ಭೂಪ್ರದೇಶಗಳನ್ನು ಇಸ್ರೇಲ್‌ ಆಕ್ರಮಿಸಿಕೊಂಡಿರುವ ಕಾರಣ, ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ನಡೆಸಿದ ದಾಳಿಯು ‘ಅಗತ್ಯವಾಗಿದ್ದ ಕ್ರಮವಾಗಿತ್ತು’ ಎಂದು ಹಮಾಸ್ ಬಂಡುಕೋರರು ಹೇಳಿದ್ದಾರೆ.

‘ಆದರೆ, ಇಸ್ರೇಲಿನ ಭದ್ರತಾ ವ್ಯವಸ್ಥೆ ಹಾಗೂ ಮಿಲಿಟರಿ ವ್ಯವಸ್ಥೆಯು ಬಹಳ ವೇಗವಾಗಿ ಕುಸಿದ ಕಾರಣದಿಂದಾಗಿ, ಗಾಜಾಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ನಿರ್ಮಾಣವಾದ ಗೊಂದಲಗಳ ಕಾರಣದಿಂದಾಗಿ ಕೆಲವು ಲೋಪಗಳು ಆಗಿವೆ...’ ಎಂದು ಬಂಡುಕೋರರು ದಾಳಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ 16 ಪುಟಗಳ ವರದಿಯಲ್ಲಿ ಹೇಳಲಾಗಿದೆ.

ದಾಳಿಯನ್ನು ಸಮರ್ಥಿಸಿ ಬಂಡುಕೋರರು ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಯಲ್ಲಿ ಬಿಡುಗಡೆ ಮಾಡಿರುವ ಮೊದಲ ವರದಿ ಇದು. ಹಮಾಸ್ ನಡೆಸಿದ ದಾಳಿಯ ಪರಿಣಾಮವಾಗಿ ಅಂದಾಜು 1,140 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ನಾಗರಿಕರು.

ದಾಳಿಯು ಪ್ಯಾಲೆಸ್ಟೀನಿನ ಜನರ ವಿರುದ್ಧ ಇಸ್ರೇಲ್‌ ನಡೆಸಿದ ಎಲ್ಲ ಬಗೆಯ ಪಿತೂರಿಗಳಿಗೆ ಎದುರಾದ ಸಹಜ ಪ್ರತಿಕ್ರಿಯೆಯಾಗಿತ್ತು, ಅಗತ್ಯವಾದ ಕ್ರಮವೂ ಆಗಿತ್ತು ಎಂದು ಬಂಡುಕೋರರು ಹೇಳಿದ್ದಾರೆ. 

ಹಮಾಸ್‌ ದಾಳಿಗೆ ಇಸ್ರೇಲ್‌ ನಡೆಸುತ್ತಿರುವ ಪ್ರತಿದಾಳಿಯಲ್ಲಿ ಗಾಜಾದಲ್ಲಿ ಕನಿಷ್ಠ 25,105 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಇವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಹಮಾಸ್‌ ಆರೋಗ್ಯ ಸಚಿವಾಲಯ ಹೇಳಿದೆ.

ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ದಾಳಿಯು, ಅಪರಾಧ ಕೃತ್ಯಗಳು ಹಾಗೂ ಇಡೀ ಗಾಜಾ ಜನರನ್ನು ಗುರಿಯಾಗಿಸಿಕೊಂಡಿರುವ ಜನಾಂಗೀಯ ನಿರ್ಮೂಲನೆ ಕೆಲಸವು ತಕ್ಷಣ ನಿಲ್ಲಬೇಕು ಎಂದು ಹಮಾಸ್ ಒತ್ತಾಯಿಸಿದೆ.

ಯುದ್ಧದ ನಂತರ ಗಾಜಾದಲ್ಲಿ ವ್ಯವಸ್ಥೆ ಹೇಗಿರಬೇಕು ಎಂಬ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯದ ಯಾವುದೇ ಯತ್ನ ಅಥವಾ ಇಸ್ರೇಲ್‌ನ ಯಾವುದೇ ಯತ್ನದ ಅಗತ್ಯವಿಲ್ಲ ಎಂದು ಕೂಡ ಹೇಳಿದೆ. ‘ತಮ್ಮ ಭವಿಷ್ಯವನ್ನು ತೀರ್ಮಾನಿಸಿಕೊಳ್ಳಲು ಹಾಗೂ ಆಂತರಿಕ ವಿಚಾರಗಳನ್ನು ನಿಭಾಯಿಸಲು ಪ್ಯಾಲೆಸ್ಟೀನ್‌ ಜನರಿಗೆ ಸಾಮರ್ಥ್ಯವಿದೆ ಎಂಬುದನ್ನು ನಾವು ಒತ್ತಿ ಹೇಳುತ್ತಿದ್ದೇವೆ. ಅವರ ಪರವಾಗಿ ತೀರ್ಮಾನಗಳನ್ನು ಕೈಗೊಳ್ಳಲು ಜಗತ್ತಿನ ಯಾರಿಗೂ ಹಕ್ಕಿಲ್ಲ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT