ಢಾಕಾ: ಉದ್ರಿಕ್ತರ ಗುಂಪು ರಾಜಧಾನಿಯಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಧ್ವಂಸಗೊಳಿಸಿದೆ.
‘ಇದೇ ವೇಳೆ ದೇಶದಾದ್ಯಂತ ನಾಲ್ಕು ಹಿಂದೂ ದೇವಾಲಯಗಳಿಗೂ ಹಾನಿಯಾಗಿದೆ ಎಂಬ ವರದಿಗಳು ಬಂದಿವೆ’ ಎಂದು ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ನಾಯಕಿ ಕಾಜೋಲ್ ದೇವನಾಥ್ ತಿಳಿಸಿದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಢಾಕಾದ ಧನ್ಮೋಂಡಿ ಪ್ರದೇಶದಲ್ಲಿರುವ ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರ ವನ್ನು ಉದ್ರಿಕ್ತರ ಗುಂಪು ಹಾನಿ ಗೊಳಿಸಿದೆ. 2010ರ ಮಾರ್ಚ್‌ನಲ್ಲಿ ಉದ್ಘಾಟನೆಗೊಂಡ ಈ ಕೇಂದ್ರವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದ್ವಿಪಕ್ಷೀಯ ಸಾಂಸ್ಕೃತಿಕ ಸಂಬಂಧವನ್ನು ಉತ್ತೇಜಿಸುತ್ತಾ ಬಂದಿದೆ. ಇಲ್ಲಿ ಯೋಗ, ಹಿಂದಿ ಭಾಷೆ, ಭಾರತೀಯ ಶಾಸ್ತ್ರೀಯ ಸಂಗೀತ ಗಾಯನ, ಕಥಕ್, ಮಣಿಪುರಿ ಸೇರಿ ಭಾರತೀಯ ನೃತ್ಯ ಪ್ರಾಕಾರಗಳ ಕಲಿಕೆಯನ್ನು ಭಾರತದ ಮೂಲದ ವೃತ್ತಿಪರರು ಮತ್ತು ತರಬೇತುದಾರರಿಂದಲೇ ಕಲಿಸಲಾಗುತ್ತಿದೆ. ಅಲ್ಲದೆ, 21,000ಕ್ಕೂ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯವನ್ನು ಸಹ ಹೊಂದಿದೆ.
ಬಂಗಬಂಧು ಮೆಮೋರಿಯಲ್ ಮ್ಯೂಸಿಯಂ ಎಂದೂ ಕರೆಯಲಾಗುವ ಬಂಗಬಂಧು ಭಾಬನ್ ಸೇರಿದಂತೆ ಢಾಕಾದ ಹಲವಾರು ಪ್ರಮುಖ ಸ್ಥಳಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ ಎಂದು ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.
1975ರಲ್ಲಿ ಅಧ್ಯಕ್ಷರಾಗಿದ್ದಾಗ ಹತ್ಯೆಗೀಡಾದ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಹೆಸರಿನಲ್ಲಿ ಈ ವಸ್ತುಸಂಗ್ರಹಾಲಯ ನಿರ್ಮಿಸಲಾಗಿತ್ತು.
ಹಸೀನಾ ಅವರ ರಾಜೀನಾಮೆ ನಂತರ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವುದರಿಂದ ಕೆಲವು ಹಿಂದೂ ಸಮಾಜದ ಮುಖಂಡರು ಭಯಭೀತರಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಶೇಖ್ ಹಸೀನಾ ಅವರು ರಾಜಕೀಯ ಪುನರಾಗಮನ ಮಾಡುವುದಿಲ್ಲ. ಅವರು ತಮ್ಮ ಕುಟುಂಬದ ಒತ್ತಾಯದ ಮೇರೆಗೆ ಸುರಕ್ಷತೆಗಾಗಿ ದೇಶ ತೊರೆದಿದ್ದಾರೆಸಜೀಬ್ ವಾಝೆದ್ ಜಾಯ್ ಹಸೀನಾ ಅವರ ಪುತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.