ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾದ ಸೇನೆಗೆ ಭಾರತದ ‘ತೇಜಸ್‌’?

ಹೊಸ ಯುದ್ಧವಿಮಾನ ಖರೀದಿ ಆಯ್ಕೆಯಲ್ಲಿ ಅಗ್ರಸ್ಥಾನ ಪಡೆದ ದೇಶೀಯ ವಿಮಾನ
Last Updated 3 ಜುಲೈ 2022, 13:38 IST
ಅಕ್ಷರ ಗಾತ್ರ

ನವದೆಹಲಿ: ಆಗ್ನೇಯಏಷ್ಯಾ ರಾಷ್ಟ್ರ ಮಲೇಷ್ಯಾವು ತನ್ನ ಹಳೆಯ ಯುದ್ಧವಿಮಾನಗಳನ್ನು ಬದಲಿಸಲು ಚಿಂತನೆ ನಡೆಸಿದ್ದು, ಭಾರತದ ‘ತೇಜಸ್’ ಲಘುಯುದ್ಧ ವಿಮಾನ ಆಯ್ಕೆಯ ಮುಂಚೂಣಿಯಲ್ಲಿದೆ. ‘ತೇಜಸ್’ ಖರೀದಿಯನ್ನು ದೃಢಪಡಿಸುವ ಸಲುವಾಗಿ ಎರಡೂ ರಾಷ್ಟ್ರಗಳ ನಡುವೆ ಮಾತುಕತೆ ನಡೆಯುತ್ತಿವೆ.

ಚೀನಾದ ಜೆಎಫ್‌–17 ಜೆಟ್, ದಕ್ಷಿಣ ಕೊರಿಯಾದ ಎಫ್‌ಎ–50 ಮತ್ತು ರಷ್ಯಾದ ಮಿಗ್–35 ಮತ್ತು ಯಾಕ್–130 ಯುದ್ಧವಿಮಾನಗಳ ತೀವ್ರ ಪೈಪೋಟಿಗಳ ನಡುವೆಯೂ ಮಲೇಷ್ಯಾವು ಭಾರತದ ದೇಶೀಯ ನಿರ್ಮಿತ ‘ತೇಜಸ್’ನತ್ತ ಒಲವು ತೋರುತ್ತಿದೆ ಎಂದು ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆದ ಆರ್. ಮಾಧವನ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಯುದ್ಧವಿಮಾನಗಳ ಖರೀದಿಯ ಒಪ್ಪಂದವು ಶೀಘ್ರದಲ್ಲೇ ಆಗಲಿದೆಯೇ ಎನ್ನುವ ಪ್ರಶ್ನೆಗೆ, ‘ಕೆಲವು ರಾಜಕೀಯ ಬದಲಾವಣೆಗಳು ನಡೆಯದ ಹೊರತು ಈ ಬಗ್ಗೆ ನಾನು ತುಂಬಾ ವಿಶ್ವಾಸ ಹೊಂದಿದ್ದೇನೆ’ ಎಂದು ಅವರು ಉತ್ತರಿಸಿದ್ದಾರೆ.

‘ಈ ಒಪ್ಪಂದಕ್ಕೆ ಸಹಿ ಹಾಕಿದರೆ, ತೇಜಸ್ ಖರೀದಿ ಮಾಡಬಯಸುವ ಇತರ ದೇಶಗಳಿಗೆ ಇದು ಉತ್ತಮ ಸಂಕೇತವನ್ನು ರವಾನಿಸಿದಂತಾಗಲಿದೆ. ಒಟ್ಟಾರೆ ರಫ್ತು ಸಾಮರ್ಥ್ಯವನ್ನೂ ಹೆಚ್ಚಿಸಿದಂತಾಗುತ್ತದೆ. ಮಾತುಕತೆಯು ಅಂತಿಮ ಹಂತದಲ್ಲಿದ್ದು, ಖರೀದಿ ಪ್ರಕ್ರಿಯೆಯನ್ನು ಮುಂದುವರಿಸಲು ಮಲೇಷ್ಯಾದ ಉನ್ನತಮಟ್ಟದ ಅಧಿಕಾರಿಗಳು ಮತ್ತು ತಜ್ಞರ ತಂಡವು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಸುಖೊಯ್‌–30 ಎಂಆರ್‌ಒ ಘಟಕ ಸ್ಥಾಪನೆ: ‘ಮಾಸ್ಕೊ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ವಿಧಿಸಿರುವುದರಿಂದ ರಷ್ಯಾದಿಂದ ವಿಮಾನಗಳ ಬಿಡಿಭಾಗಗಳ ಸಂಗ್ರಹಣೆಯಲ್ಲಿ ಮಲೇಷ್ಯಾ ತೊಂದರೆ ಎದುರಿಸುತ್ತಿದೆ. ಹಾಗಾಗಿ,ಖರೀದಿಯ ಭಾಗವಾಗಿ ಭಾರತವು ಮಲೇಷ್ಯಾದಲ್ಲಿ ರಷ್ಯಾ ಮೂಲದ ಸುಖೊಯ್ –30 ಯುದ್ಧ ವಿಮಾನಗಳ ಎಂಆರ್‌ಒ (ನಿರ್ವಹಣೆ, ರಿಪೇರಿ ಮತ್ತು ಕೂಲಂಕುಷ ಪರೀಕ್ಷೆ) ಘಟಕ ಸ್ಥಾಪಿಸಲು ಭರವಸೆ ನೀಡಿದೆ’ ಎಂದೂ ಅವರು ಹೇಳಿದ್ದಾರೆ.

ಎಚ್‌ಎಎಲ್‌ನಿಂದ ಸ್ವದೇಶದಲ್ಲೇ ನಿರ್ಮಿತವಾಗಿರುವ ‘ತೇಜಸ್’ ಅತ್ಯಂತ ಚುರುಕುತನದಿಂದ ಕೂಡಿದ ಬಹುಕಾರ್ಯ ನಿರ್ವಹಿಸುವ ಸೂಪರ್‌ಸಾನಿಕ್ ಯುದ್ಧವಿಮಾನವಾಗಿದೆ. ಚೀನಾದ ಜೆಎಫ್‌–17 ಮತ್ತು ದಕ್ಷಿಣ ಕೊರಿಯಾದ ಎಫ್‌ಎ–50 ಯುದ್ಧವಿಮಾನಗಳಿಗೆ ಹೋಲಿಸಿದರೆ ಭಾರತದ ತೇಜಸ್ ಉತ್ಕೃಷ್ಟಮಟ್ಟದ ವಿಮಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT