ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿರುವ ಪತ್ರಕರ್ತೆಯರಿಗೆ ‘ಗೋಲ್ಡನ್‌ ಪೆನ್‌’ ಪ್ರಶಸ್ತಿಯ ಗರಿ

Published 28 ಜೂನ್ 2023, 18:50 IST
Last Updated 28 ಜೂನ್ 2023, 18:50 IST
ಅಕ್ಷರ ಗಾತ್ರ

ಬೆಂಗಳೂರು: ವರ್ಲ್ಡ್‌ ಅಸೋಶಿಯೇಷನ್‌ ಆಫ್‌ ನ್ಯೂಸ್‌ ಪಬ್ಲಿಷರ್ಸ್‌ (ವ್ಯಾನ್‌–ಇಫ್ರಾ) ಕೊಡಮಾಡುವ ಪ್ರಸಕ್ತ ಸಾಲಿನ ವಾರ್ಷಿಕ ‘ಗೋಲ್ಡನ್‌ ಪೆನ್‌ ಆಫ್‌ ಫ್ರೀಡಂ’ ಪ್ರಶಸ್ತಿಗೆ ಇರಾನ್ ಪತ್ರಕರ್ತೆಯರಾದ ಇಲಾಹೆ ಮೊಹಮ್ಮದಿ ಮತ್ತು ನಿಲೋಫರ್ ಹಮೇದಿ ಭಾಜನರಾಗಿದ್ದಾರೆ. ಈ ಇಬ್ಬರೂ ಪತ್ರಕರ್ತೆಯರು ಈಗ ಜೈಲಿನಲ್ಲಿದ್ದಾರೆ.

ತೈವಾನ್‌ನ ತೈಪೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪತ್ರಿಕಾ ಸ್ವಾತಂತ್ರ್ಯ ಪ್ರತಿಪಾದನೆ ಮತ್ತು ರಕ್ಷಣೆಯಲ್ಲಿ ಮಹತ್ತರ ಪಾತ್ರ ನಿಭಾಯಿಸುತ್ತಿರುವ ಪತ್ರಕರ್ತರಿಗೆ ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲಾಗುತ್ತದೆ.

ಇರಾನ್‌ನಲ್ಲಿ ಹಿಜಾಬ್‌ ವಿರುದ್ಧ ಧ್ವನಿ ಎತ್ತಿದ ಕುರ್ದಿಷ್‌ ಯುವತಿ ಮಹ್ಸಾ ಅಮಿನಿ ಸಾವು ಪ್ರಕರಣವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದು ಈ ಇಬ್ಬರು ಪತ್ರಕರ್ತೆಯರ ಹೆಗ್ಗಳಿಕೆ. ಇದರಿಂದ ಇರಾನಿ ಸರ್ಕಾರ ಕೆಂಗಣ್ಣಿಗೆ ಗುರಿಯಾಗಿರುವ ಈ ಇಬ್ಬರು ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ವಸ್ತ್ರಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಮಹ್ಸಾ ಅಮಿನಿ ಅವರನ್ನು ನೈತಿಕ ಪೊಲೀಸರು ವಶಕ್ಕೆ ಪಡೆದಿದ್ದರು. ಅವರ ವಶದಲ್ಲಿದ್ದ ವೇಳೆಯೇ ಅವರು ಮೃತಪಟ್ಟಿದ್ದರು. ಅಮಿನಿ ಸಾವು ಖಂಡಿಸಿ ಅಲ್ಲಿನ ಮುಸ್ಲಿಂ ಮಹಿಳೆಯರು ಕೂದಲು ಕತ್ತರಿಸಿ, ಹಿಜಾಬ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಅಮಿನಿ ಸಾವಿನ ಪ್ರಕರಣದ ವಿರುದ್ಧ ಇಡೀ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. 

ನಿಲೋಫರ್ ಹಮೇದಿ ಅಲ್ಲಿನ ‘ಶಾರ್ಗ್’ ಹೆಸರಿನ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯಲ್ಲಿದ್ದ ಅಮಿನಿ ಅವರ ಮೃತದೇಹದ ಫೋಟೊ ಮತ್ತು ವರದಿಯನ್ನು ಆನ್‌ಲೈನ್‌ನಲ್ಲಿ ಮೊದಲು ಪ್ರಕಟಿಸಿದ್ದು ಇವರೇ.

ಆ ನಂತರ ಸಾವಿರಾರು ಜನರು ಪಾಲ್ಗೊಂಡಿದ್ದ ಅಮಿನಿ ಅಂತ್ಯಕ್ರಿಯೆಯನ್ನು ಇಲಾಹೆ ಮೊಹಮ್ಮದಿ ವರದಿ ಮಾಡಿದ್ದರು. ಬಳಿಕ ಇಡೀ ರಾಷ್ಟ್ರವ್ಯಾಪಿ ಹಬ್ಬಿದ ಹೋರಾಟವು ಇರಾನಿ ಸರ್ಕಾರದ ರಾಜಕೀಯ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯನ್ನು ಪ್ರಶ್ನಿಸಿತ್ತು.‌

ದೇಶದಾದ್ಯಂತ ಹೋರಾಟದ ಕಿಚ್ಚು ಹಬ್ಬಲು ಈ ಇಬ್ಬರು ಪತ್ರಕರ್ತೆಯರೇ ಕಾರಣವೆಂದು ಅಲ್ಲಿನ ಗುಪ್ತಚರ ಸಚಿವಾಲಯ ಆರೋಪಿಸಿತ್ತು. ದೇಶದ ಭದ್ರತೆ ಮತ್ತು ಹಿತಾಸಕ್ತಿಗೆ ಧಕ್ಕೆ ತಂದ ಆರೋಪದ ಮೇರೆಗೆ ಈ ಇಬ್ಬರನ್ನು ಬಂಧಿಸಲಾಗಿದೆ.

‘ಈ ಇಬ್ಬರು ಯುವ ಪತ್ರಕರ್ತೆಯರ ಬಂಧನ ಅಮಾನವೀಯ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಂಧನದಲ್ಲಿಡುವುದು ಅಕ್ಷಮ್ಯ. ಕೂಡಲೇ, ಇಬ್ಬರನ್ನು ಬಂಧನದಿಂದ ಮುಕ್ತಗೊಳಿಸಬೇಕು’ ಎಂದು ಪ್ರಶಸ್ತಿಯ ಆಯ್ಕೆ ಸಮಿತಿ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT