ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಇಸ್ರೇಲ್‌ ರಾಯಭಾರ ಕಚೇರಿ ಅಧಿಕಾರಿಗಳ ಮೇಲೆ ಹಲ್ಲೆ

Published 13 ಅಕ್ಟೋಬರ್ 2023, 9:23 IST
Last Updated 13 ಅಕ್ಟೋಬರ್ 2023, 9:23 IST
ಅಕ್ಷರ ಗಾತ್ರ

ಬೀಜಿಂಗ್; ಬೀಜಿಂಗ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಉದ್ಯೋಗಿಯೊಬ್ಬರ ಮೇಲೆ ಶುಕ್ರವಾರ ಹಲ್ಲೆ ನಡೆದಿದ್ದು,  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ದಾಳಿಯನ್ನು ಚೀನಾ ತಕ್ಷಣವೇ ಒಪ್ಪಿಕೊಂಡಿಲ್ಲ.

‘ದಾಳಿಯು ರಾಯಭಾರ ಕಚೇರಿ ಒಳಗೆ ನಡೆದಿಲ್ಲ. ಉದ್ಯೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ದಾಳಿ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಲು ‌ಇಸ್ರೇಲ್‌ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. 

ಹಲ್ಲೆಗೆ ಒಳಗಾದ ವ್ಯಕ್ತಿಯ ಗುರುತು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಹಾಗೂ ಈ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.  

ಬೀಜಿಂಗ್‌ನಲ್ಲಿರುವ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ರಾಯಭಾರ ಕಚೇರಿಗಳಿಗೆ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. 

ಇದಕ್ಕೂ ಮುನ್ನ ಇಸ್ರೇಲ್ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘ಹಮಾಸ್ ಬಂಡುಕೋರರ ದಾಳಿಯ ಬಳಿಕ ಚೀನಾದ ಹೇಳಿಕೆಗಳ ಬಗ್ಗೆ ತಮ್ಮ ದೇಶದ ಅಸಮಾಧಾನ ಹೊಂದಿರುವ ಬಗ್ಗೆ ರಾಯಭಾರಿ ರಫಿ ಹರ್ಫಾಜ್ ಗುರುವಾರ ಮಧ್ಯಪ್ರಾಚ್ಯದಲ್ಲಿನ ಚೀನಾದ ರಾಯಭಾರಿ ಝೈ ಜುನ್ ಅವರೊಂದಿಗೆ ಮಾತನಾಡಿದ್ದರು’ ಎಂದು ತಿಳಿಸಿದೆ.

ಏಳನೇ ದಿನಕ್ಕೆ ಕಾಲಿಟ್ಟ ಯುದ್ಧ

‌ಹಮಾಸ್‌ ಬಂಡುಕೋರರು ಹಾಗೂ ಇಸ್ರೇಲ್ ಸೇನೆ ನಡುವಿನ ಸಮರದ ಏಳನೇ ದಿನವಾದ ಶುಕ್ರವಾರವೂ ಮುಂದುವರಿದಿದೆ.

ಇಸ್ರೇಲ್‌ ದಾಳಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗಾಜಾ ಪಟ್ಟಿಗೆ ಅಗತ್ಯ ವೈದ್ಯಕೀಯ ಮತ್ತು ಮಾನವೀಯ ನೆರವು ನೀಡುವಂತೆ ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರು ಅಂತರರಾಷ್ಟ್ರೀಯ ಪರಿಹಾರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರ ಆದೇಶದಂತೆ ಹಮಾಸ್ ಹಿಡಿತದಲ್ಲಿರುವ ಗಾಜಾ ಪಟ್ಟಿಯ ಸುತ್ತ ಮುತ್ತಿಗೆ ಹಾಕಿ, ಸಂಪೂರ್ಣ ದಿಗ್ಬಂಧನ ಹೇರಲಾಗಿದೆ. ಜತೆಗೆ ವಿದ್ಯುತ್‌, ಆಹಾರ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲಾಗಿದೆ.

ಗಾಜಾ ಪ್ರದೇಶವು ತನ್ನ ಮೂಲಭೂತ ಅಗತ್ಯಗಳಿಗಾಗಿ ಇಸ್ರೇಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈಗ ಮೂಲಭೂತ ಸೌಕರ್ಯಗಳೂ ದೊರೆಯದಿರುವುದು ಗಾಜಾದಲ್ಲಿರುವ 23 ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ. ಆಹಾರ ಮತ್ತು ಇಂಧನದ ಕೊರತೆಯಿಂದಾಗಿ ಅಲ್ಲಿನ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT