ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾದಿಂದ ನಾಗರಿಕರ ಸ್ಥಳಾಂತರಕ್ಕೆ ಇಸ್ರೇಲ್ ಯೋಜನೆ

Published 26 ಫೆಬ್ರುವರಿ 2024, 12:54 IST
Last Updated 26 ಫೆಬ್ರುವರಿ 2024, 12:54 IST
ಅಕ್ಷರ ಗಾತ್ರ

ಗಾಜಾ ಪಟ್ಟಿ: ಗಾಜಾದಲ್ಲಿ ‘ಕದನ ನಡೆಯುತ್ತಿರುವ’ ಸ್ಥಳಗಳಿಂದ ನಾಗರಿಕರನ್ನು ಸ್ಥಳಾಂತರಿಸಲು ಯೋಜನೆಯೊಂದನ್ನು ಇಸ್ರೇಲ್ ಮಿಲಿಟರಿ ಸಿದ್ಧಪಡಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಗಾಜಾದ ದಕ್ಷಿಣ ಭಾಗದಲ್ಲಿ ಇರುವ ರಫಾ ನಗರದ ಮೇಲೆ ಭೂಸೇನೆಯು ದಾಳಿ ನಡೆಸುವ ಅಗತ್ಯ ಇದೆ ಎಂದು ಪ್ರಧಾನಿ ನೆತನ್ಯಾಹು ಈಗಾಗಲೇ ಹೇಳಿದ್ದಾರೆ.

ರಫಾ ಮೇಲೆ ಭೂದಾಳಿ ನಡೆಸಿದರೆ ನಾಗರಿಕರು ಭಾರಿ ಸಂಖ್ಯೆಯಲ್ಲಿ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಲವು ದೇಶಗಳು ಹಾಗೂ ನೆರವು ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ರಫಾ ನಗರದ ಮೇಲೆ ಇಸ್ರೇಲ್‌ ಭೂಸೇನಾ ಕಾರ್ಯಾಚರಣೆ ನಡೆಸಿಲ್ಲ. ಇಲ್ಲಿ 14 ಲಕ್ಷಕ್ಕೂ ಹೆಚ್ಚು ಮಂದಿ ಪ್ಯಾಲೆಸ್ಟೀನ್ ನಾಗರಿಕರು ನೆಲೆ ಕಂಡುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಇತರ ಕಡೆಗಳಿಂದ ನೆಲೆ ಕಳೆದುಕೊಂಡು ಬಂದವರು.

ನೆರವು ಸಾಮಗ್ರಿಗಳನ್ನು ಈಜಿಪ್ಟ್‌ನಿಂದ ತರುವುದು ಕೂಡ ರಫಾ ನಗರದ ಮೂಲಕವೇ. ‘ಗಾಜಾ ಪಟ್ಟಿಯಲ್ಲಿ ಕದನ ನಡೆಯುತ್ತಿರುವ ಸ್ಥಳಗಳಿಂದ ನಾಗರಿಕರನ್ನು ಸ್ಥಳಾಂತರ ಮಾಡಲು ಯೋಜನೆಯೊಂದನ್ನು ಮಿಲಿಟರಿಯು ಯುದ್ಧ ಕಾಲದ ಸಂಪುಟಕ್ಕೆ ಸಲ್ಲಿಸಿದೆ’ ಎಂದು ನೆತನ್ಯಾಹು ಅವರ ಕಚೇರಿಯು ತಿಳಿಸಿದೆ. ಈ ಕುರಿತು ಹೆಚ್ಚಿನ ವಿವರಗಳು ಇಲ್ಲ.

ಈಜಿಪ್ಟ್‌, ಕತಾರ್ ಮತ್ತು ಅಮೆರಿಕದ ‘ತಜ್ಞರು’ ದೋಹಾದಲ್ಲಿ ಮಾತುಕತೆ ನಡೆಸಿದ ನಂತರದಲ್ಲಿ ಈ ಪ್ರಕಟಣೆ ಹೊರಬಿದ್ದಿದೆ, ಈ ಮಾತುಕತೆಯಲ್ಲಿ ಇಸ್ರೇಲ್ ಮತ್ತು ಹಮಾಸ್‌ನ ಪ್ರತಿನಿಧಿಗಳು ಕೂಡ ಪಾಲ್ಗೊಂಡಿದ್ದರು ಎಂದು ಈಜಿಪ್ಟ್‌ ಸರ್ಕಾರದ ಜೊತೆ ಸಂಬಂಧ ಹೊಂದಿರುವ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ರಫಾ ಮೇಲೆ ಇಸ್ರೇಲ್ ಭೂದಾಳಿ ನಡೆಸಿದಲ್ಲಿ, ಹಮಾಸ್ ಮೇಲೆ ಇಸ್ರೇಲ್ ಕೆಲವೇ ವಾರಗಳಲ್ಲಿ ಜಯ ಸಾಧಿಸಲು ಸಾಧ್ಯವಾಗುತ್ತದೆ ಎಂದು ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್‌ ಪಡೆಗಳಿಂದ ದಾಳಿ ಮುಂದುವರಿದಿದೆ, ರಾತ್ರಿ ವೇಳೆಯಲ್ಲಿ ಒಟ್ಟು 92 ಮಂದಿ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯವು ಸೋಮವಾರ ಬೆಳಿಗ್ಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT