ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Israel Hamas War: ನಿರಾಶ್ರಿತ ಶಿಬಿರಗಳ ಮೇಲೆ ಇಸ್ರೇಲ್‌ ದಾಳಿ

Published 27 ಡಿಸೆಂಬರ್ 2023, 15:26 IST
Last Updated 27 ಡಿಸೆಂಬರ್ 2023, 15:26 IST
ಅಕ್ಷರ ಗಾತ್ರ

ರಫಾ: ಇಸ್ರೇಲ್‌ ಪಡೆಗಳು, ಕೇಂದ್ರ ಮತ್ತು ದಕ್ಷಿಣ ಗಾಜಾ ಮೇಲೆ ತೀವ್ರ ದಾಳಿ ಆರಂಭಿಸಿದ್ದು, ಬುರೇಜಿ ನಿರಾಶ್ರಿತರ ಶಿಬಿರ, ಖಾನ್‌ ಯೂನಿಸ್‌ ಮತ್ತು ರಫಾ ನಗರಗಳ ಮೇಲೆ ಬಾಂಬ್‌ಗಳ ಸುರಿಮಳೆಗರೆದಿವೆ.

ಉತ್ತರ ಗಾಜಾ ಮೇಲೆ ದಾಳಿ ತೀವ್ರಗೊಳ್ಳುತ್ತಿದ್ದಂತೆಯೇ ಸುಮಾರು 10,000 ಜನರು ಇಲ್ಲಿ ಬಂದು ಆಶ್ರಯ ಪಡೆದಿದ್ದರು.

‘ಮಂಗಳವಾರ ರಾತ್ರಿ ಇಡೀ ದುಃಸ್ವಪ್ನದಂತಿತ್ತು. ಯುದ್ಧ ಆರಂಭವಾದಾಗಿನಿಂದ ಇಷ್ಟೊಂದು ತೀವ್ರ ತರದ ಬಾಂಬ್‌ ದಾಳಿ ಕಂಡಿರಲಿಲ್ಲ’ ಎಂದು ರಮಿ ಅಬು ಮೊಸಾಬ್‌ ಎಂಬವರು ಹೇಳಿದ್ದಾರೆ.

ಈ ಬೆನ್ನಲ್ಲೇ ಗಾಜಾದ ಪ್ರಮುಖ ಟೆಲಿಕಾಂ ಪೂರೈಕೆದಾರರು, ಆಕ್ರಮಿತ ಪ್ರದೇಶಗಳಲ್ಲಿ ಮತ್ತೆ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ.

ಹಮಾಸ್‌ ಬಂಡುಕೋರರನ್ನು ಸದೆಬಡಿಯುವ ಉದ್ದೇಶದಿಂದ ಇಸ್ರೇಲ್, ಉತ್ತರ ಗಾಜಾ ಮತ್ತು ದಕ್ಷಿಣದ ಖಾನ್‌ ಯೂನಿಸ್‌ ನಗರದ ಮೇಲೆ ತೀವ್ರ ವಾಯುದಾಳಿ ಆರಂಭಿಸಿದಾಗ ಜನರು ಪ್ರಾಣ ಉಳಿಸಿಕೊಳ್ಳಲು ಪ್ಯಾಲೆಸ್ಟೀನ್‌ನ ಸಣ್ಣ ಸಣ್ಣ ಮೂಲೆಗಳಿಗೆ ಸ್ಥಳಾಂತರಗೊಂಡಿದ್ದರು. ಸದ್ಯ ಇಸ್ರೇಲ್ ಅಲ್ಲೂ ತನ್ನ ಕಬಂದಬಾಹುಗಳನ್ನು ಚಾಚಿ ದಾಳಿ ನಡೆಸುತ್ತಿದೆ.

ಕ್ರಿಸ್‌ಮಸ್‌ ಮುನ್ನಾದಿನದಿಂದ ಈವರೆಗೆ ಕೇಂದ್ರ ಗಾಜಾದಲ್ಲಿ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.

ಕೇಂದ್ರ ಗಾಜಾದಿಂದ ಸ್ಥಳಾಂತರಗೊಳ್ಳುವಂತೆ ಅಲ್ಲಿನ ನಿವಾಸಿಗಳಿಗೆ ಇಸ್ರೇಲ್‌ ಆದೇಶಿಸಿದೆ. ಆದರೆ ಅಲ್ಲಿ ಯುದ್ಧಕ್ಕೂ ಮೊದಲು 90,000 ಜನರು ನೆಲೆಸಿದ್ದರು, ಸದ್ಯ ವಿವಿಧ ಪ್ರದೇಶಗಳಿಂದ ಸ್ಥಳಾಂತರಗೊಂಡಿದ್ದ 61,000 ಮಂದಿ ಅಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದೆ.

ಕದನ ವಿರಾಮ ಘೋಷಣೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದ್ದರೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ತಮ್ಮ ಪಟ್ಟು ಸಡಿಲಿಸದೆ, ಯುದ್ಧ ತೀವ್ರಗೊಳಿಸುವುದಾಗಿ ಪುನರುಚ್ಚರಿಸಿದ್ದಾರೆ.

ಯುದ್ಧದಲ್ಲಿ ಈವರೆಗೆ 20,900 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಾನವೀಯ ನೆರವಿಗೆ ಸಮನ್ವಯಾಧಿಕಾರಿ ನೇಮಕ:

ವಿಶ್ವಸಂಸ್ಥೆ: ನೆದರ್‌ಲ್ಯಾಂಡ್‌ನ ಮಾಜಿ ಉಪ ಪ್ರಧಾನಿ ಸಿಗ್ರಿದ್‌ ಕಾಗ್‌ ಅವರನ್ನು ಯುದ್ಧಪೀಡಿತ ಗಾಜಾಗೆ ಮಾನವೀಯ ನೆರವು ಒದಗಿಸುವ ವಿಶ್ವಸಂಸ್ಥೆಯ ಸಮನ್ವಯಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ತಿಳಿಸಿದರು.

ಜನವರಿ 8ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಗಾಜಾಗೆ ನೀಡುವ ವಿವಿಧ ಸ್ವರೂಪದ ಮಾನವೀಯ ನೆರವುಗಳ ಕುರಿತು ಸಮನ್ವಯ ಮತ್ತು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಗುಟೆರಸ್ ಹೇಳಿದರು.

ಗಾಜಾದಲ್ಲಿ 20 ಲಕ್ಷಕ್ಕೂ ಅಧಿಕ ಜನರು ಆಹಾರ, ನೀರು ಮತ್ತು ಔಷಧ ಲಭ್ಯವಿಲ್ಲದೆ ಪರದಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT