ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌: ಕೀವ್‌, ಲಿವೀವ್‌ ಮೇಲೆ ರಷ್ಯಾ ವೈಮಾನಿಕ ದಾಳಿ

ಹಲವು ಕಟ್ಟಡಗಳಿಗೆ ಹಾನಿ * ಯಾವುದೇ ಪ್ರಾಣಾಪಾಯದ ವರದಿಗಳಿಲ್ಲ
Published 24 ಮಾರ್ಚ್ 2024, 13:57 IST
Last Updated 24 ಮಾರ್ಚ್ 2024, 13:57 IST
ಅಕ್ಷರ ಗಾತ್ರ

ಕೀವ್(ಉಕ್ರೇನ್‌): ರಾಜಧಾನಿ ಕೀವ್‌ ಹಾಗೂ ಲಿವೀವ್‌ ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ ಭಾರಿ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ.

‘ಕೀವ್‌ ಮತ್ತು ಲಿವೀವ್‌ ನಗರಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕೆಲ ಕಟ್ಟಡಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್‌ ಗುರಿಯಾಗಿಸಿ ರಷ್ಯಾ ಹಾರಿಸಿದ್ದ ಕ್ರೂಸ್‌ ಕ್ಷಿಪಣಿಯೊಂದು ತನ್ನ ವಾಯುಪ್ರದೇಶ ಉಲ್ಲಂಘಿಸಿದೆ. ಇದರ ಬೆನ್ನಲ್ಲೇ, ತನ್ನ ಭದ್ರತಾ ಪಡೆಗಳಿಗೆ ಹೈಅಲರ್ಟ್‌ ಘೋಷಿಸಲಾಗಿದೆ ಎಂದು ಪೋಲೆಂಡ್‌ ಹೇಳಿದೆ.

ರಷ್ಯಾ ರಾಜಧಾನಿ ಮಾಸ್ಕೊ ಹೊರವಲಯದ ಸಭಾಂಗಣದ ಮೇಲೆ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ 133 ಮಂದಿ ಮೃತಪಟ್ಟಿದ್ದರು. ಈ ಘಟನೆ ಕೂಡ ಉಕ್ರೇನ್‌ ಮತ್ತು ರಷ್ಯಾ ನಡುವಿನ ಕದನ ಮತ್ತಷ್ಟು ತೀವ್ರಗೊಳ್ಳಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕ್ರೀಮಿಯಾ ದ್ವೀಪದ ಬಳಿ ರಷ್ಯಾಕ್ಕೆ ಸೇರಿದ ಎರಡು ಯುದ್ಧನೌಕೆಗಳ ಮೇಲೆ ದಾಳಿ ನಡೆಸಿರುವುದಾಗಿಯೂ ಉಕ್ರೇನ್‌ ಹೇಳಿಕೊಂಡಿದೆ. 

ಬಖ್ಮಟ್‌ನ ಪಶ್ಚಿಮಕ್ಕೆ ಇರುವ ಇವಾನಿವ್‌ಸ್ಕೆ ಗ್ರಾಮವನ್ನು ವಶಪಡಿಸಿಕೊಂಡಿದ್ದಾಗಿ ರಷ್ಯಾ ಶನಿವಾರವಷ್ಟೇ ಹೇಳಿತ್ತು. ಮಾರನೇ ದಿನವೇ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ.

‘ರಾಜಧಾನಿಯಲ್ಲಿ ಭಾರಿ ಸ್ಫೋಟಗಳು ಕಂಡುಬರುತ್ತಿದ್ದು, ವಾಯು ರಕ್ಷಣಾ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಯಾರೂ ಮನೆಗಳಿಂದ ಹೊರಬರಬಾರದು’ ಎಂದು ಕೀವ್‌ ಮೇಯರ್ ವಿಟಾಲಿ ಕ್ಲಿಶ್ಚಿಕೊ ಅವರು ಸಾಮಾಜಿಕ ಜಾಲತಾಣ ಟೆಲಿಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಪೋಲೆಂಡ್‌ ಗಡಿಗೆ ಹೊಂದಿಕೊಂಡಂತೆ, ಲಿವೀವ್‌ ನಗರದ ದಕ್ಷಿಣಕ್ಕೆ 80 ಕಿ.ಮೀ. ದೂರದಲ್ಲಿರುವ ಸ್ಟ್ರೈಯಿ ಜಿಲ್ಲೆ ಮೇಲೂ ವೈಮಾನಿಕ ದಾಳಿ ನಡೆದಿದೆ’ ಎಂದು ಲಿವೀವ್‌ ಗವರ್ನರ್ ಮಕ್ಸಿಮ್ ಕೊಜಿತ್ಸಕ್‌ಯಿ ಹೇಳಿದ್ದಾರೆ.

ಉಕ್ರೇನ್‌ನ ಪೂರ್ವಭಾಗದ ನಿಪ್ರೊಪೆಟ್ರೊವ್‌ಸ್ಕ್‌ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT