ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿನ್ಲೆಂಡ್‌ ವಿ.ವಿಯಿಂದ ಪ್ರೀತಿ ಹುಟ್ಟುವ ಬಗೆಯ ಅಧ್ಯಯನ: ಅತಿ ಮಧುರ ಈ ಅನುರಾಗ!

Published 25 ಸೆಪ್ಟೆಂಬರ್ 2023, 1:05 IST
Last Updated 25 ಸೆಪ್ಟೆಂಬರ್ 2023, 1:05 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರೀತಿ’ ಒಂದು ಸುಂದರ ಅನುಭವ. ಅದು ಕೇವಲ ಹದಿಹರೆಯದವರ ಬಾಹ್ಯ ಆಕರ್ಷಣೆಯ ತೋರ್ಪಡಿಕೆಯಷ್ಟೇ ಅಲ್ಲ. ಅದಕ್ಕೆ ನಾನಾ ರೂಪಗಳಿವೆ ಎಂದು ಫಿನ್ಲೆಂಡ್‌ನ ಆಲ್ಟೊ ವಿಶ್ವವಿದ್ಯಾಲಯದ ಹೊಸ ಅಧ್ಯಯನವೊಂದು ಹೇಳಿದೆ.

ಮಾನವನ ಶರೀರದಲ್ಲಿ ಹುಟ್ಟುವ ಪ್ರೀತಿಯ ವಿಭಿನ್ನ ರೂಪಗಳು ಹಾಗೂ ಅದರ ಭಾವೋತ್ಕಟತೆಯನ್ನು ವಿಶ್ವವಿದ್ಯಾಲಯದ ಸಂಶೋಧಕರು ದಾಖಲಿಸಿದ್ದಾರೆ. ಪ್ರೀತಿ ಅರಳುವ ಬಗೆಯ ಬಗ್ಗೆ ನೂರಾರು ಜನರ ಸಮೀಕ್ಷೆ ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ಪ್ರಣಯ, ಲೈಂಗಿಕ ಪ್ರೀತಿ, ಪೋಷಕರ ಪ್ರೀತಿ, ಸ್ನೇಹಿತರು, ಅಪರಿಚಿತರು, ನಿಸರ್ಗ, ದೇವರು ಸೇರಿದಂತೆ 27 ಬಗೆಯ ಪ್ರೀತಿ ಹುಟ್ಟುವ ಮಾದರಿಗಳನ್ನು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರೀತಿಗೆ ದುರ್ಬಲ ವ್ಯಕ್ತಿಯನ್ನು ಬಲಶಾಲಿಗೊಳಿಸುವ ಅಧಮ್ಯ ಶಕ್ತಿಯಿದೆ ಎಂದು ಸಂಶೋಧಕರು ಹೇಳಿದ್ದು, ‘ಫಿಲಾಸಫಿಕಲ್ ಸೈಕಾಲಜಿ’ ಜರ್ನಲ್‌ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ. 

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ತಮ್ಮ ದೇಹದಲ್ಲಿ ಪ್ರೀತಿಯ ವಿಭಿನ್ನ ರೂಪಗಳನ್ನು ಎಲ್ಲಿ ಅನುಭವಿಸಿದ್ದಾರೆ. ಜೊತೆಗೆ, ಆ ಪ್ರೀತಿಯು ದೈಹಿಕ ಮತ್ತು ಮಾನಸಿಕವಾಗಿ ಅವರಿಗೆ ಎಷ್ಟು ಉತ್ಕಟವಾಗಿ ಕಾಡಿದೆ ಎಂಬ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮಾನವ ದೇಹದಲ್ಲಿ ಅತಿ ಉತ್ಕಟ ಪ್ರೀತಿ ಅನುಭವಕ್ಕೆ ಬರುವುದು ಯಾವಾಗ ಎಂಬುದನ್ನೂ ಸಂಶೋಧನೆಯಲ್ಲಿ ದಾಖಲಿಸಿದ್ದಾರೆ.

ಉನ್ನತ ಶಿಕ್ಷಣದ ಹಂತದಲ್ಲಿರುವಾಗ ಯುವತಿಯರ ದೇಹದಲ್ಲಿ ಪ್ರೀತಿಯ ತೀವ್ರತೆ ಹೆಚ್ಚಿರುತ್ತದೆ ಎಂದು ವರದಿ ಹೇಳಿದೆ.

‘ನಿಕಟ ಸಂಬಂಧಗಳಲ್ಲಿ ಪ್ರೀತಿ ಸದೃಶವಾಗಿರುತ್ತದೆ. ಜೊತೆಗೆ, ಅದು ಗಾಢವಾಗಿ ಅನುಭವಕ್ಕೆ ಬರುವುದು ಗಮನಾರ್ಹ ಸಂಗತಿಯಾಗಿದ್ದು, ಅದಕ್ಕೆ ಅಚ್ಚರಿಪಡಬೇಕಿಲ್ಲ’ ಎಂದು ಈ ಅಧ್ಯಯನಕ್ಕೆ ಸಹಕರಿಸಿದ ದಾರ್ಶನಿಕ ಪಾರ್ಟಿಲಿ ರಿನ್ನೆ ಹೇಳುತ್ತಾರೆ.

‘ವ್ಯಕ್ತಿಗಳ ನಡುವಿನ ಪ್ರೀತಿಯನ್ನು ಲೈಂಗಿಕ ಹಾಗೂ ಲೈಂಗಿಕೇತರ ಎಂದು ವಿಂಗಡಿಸಲಾಗಿದೆ. ಪರಸ್ಪರ ಹತ್ತಿರ ಇರುವ ಪ್ರೀತಿಯ ಪ್ರಕಾರಗಳು ಲೈಂಗಿಕ ಅಥವಾ ಪ್ರಣಯ ಆಯಾಮವನ್ನು ಹೊಂದಿರುತ್ತವೆ’ ಎನ್ನುತ್ತಾರೆ ಅವರು. 

ಅಧ್ಯಯನದಲ್ಲಿ ಪಾಲ್ಗೊಂಡವರ ಮುಂದೆ ಪ್ರೀತಿ ಬಿಂಬಿಸುವ ಛಾಯಾ ರೇಖಾಕೃತಿಗಳನ್ನು ಪ್ರದರ್ಶಿಸಿ ಅವರ ದೇಹದಲ್ಲಾದ ಬದಲಾವಣೆಯನ್ನು ಅವಲೋಕಿಸಲಾಗಿದೆ. ಜೊತೆಗೆ, ಅವರ ಮನಸ್ಸಿನ ಆಹ್ಲಾದಕರ ಭಾವನೆಗಳನ್ನು ಗುರುತಿಸಲಾಗಿದೆ. ಬಳಿಕ ಅವರ ಏಕಾಂತ ಸ್ಥಿತಿಯಲ್ಲಿ ಪ್ರೀತಿಯ ರೂಪಗಳ ಬಗ್ಗೆ ಪ್ರಶ್ನಿಸಿ ಮಾಹಿತಿ ಕಲೆ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT