ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ: ಆಹಾರ ವಿತರಣೆ ವೇಳೆ ನೂಕು ನುಗ್ಗಲು; 100ಕ್ಕೂ ಅಧಿಕ ಮಂದಿ ಸಾವು

Published 1 ಮಾರ್ಚ್ 2024, 2:36 IST
Last Updated 1 ಮಾರ್ಚ್ 2024, 2:36 IST
ಅಕ್ಷರ ಗಾತ್ರ

ಗಾಜಾ: ಯುದ್ಧ ಪೀಡಿತ ಪ್ಯಾಲೆಸ್ಟೀನ್‌ನ ಉತ್ತರ ಗಾಜಾ ನಗರದಲ್ಲಿ ಆಹಾರ ವಿತರಣೆ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಕನಿಷ್ಠ 104 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್ ಅಧಿಕಾರಿಗಳು ತಿಳಿಸಿರುವುದಾಗಿ ಸಿಎನ್‌ಎನ್‌ ವರದಿ ಮಾಡಿದೆ.

ಆಹಾರ ವಿತರಿಸುತ್ತಿದ್ದ ಟ್ರಕ್‌ಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾಗ ಇಸ್ರೇಲ್ ಪಡೆ ಗುಂಡು ಹಾರಿಸಿದ್ದರಿಂದ ಭೀತಿಯಿಂದ ಜನ ಓಡಲಾರಂಭಿಸಿದ್ದು, ನೂಕು ನುಗ್ಗಲು ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಗಾಜಾ ನಗರದಲ್ಲಿ ಆಹಾರಕ್ಕಾಗಿ ಜನರ ಹಾಹಾಕಾರ, ಸ್ಥಳಕ್ಕೆ ಬಂದ ಆಹಾರ ಟ್ರಕ್ ಬಳಿಗೆ ಹಿಂಡು ಹಿಂಡಾಗಿ ಓಡಿದ ದೃಶ್ಯದ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಜನರ ಗುಂಪಿನ ಬಳಿ ಇಸ್ರೇಲ್ ಪಡೆಗಳು ಗುಂಡು ಹಾರಿಸಿದ್ದರಿಂದ ಗಾಬರಿಗೊಂಡ ಜನ ಓಡಲಾರಂಭಿಸಿದ್ದು, ಕಾಲ್ತುಳಿತದಲ್ಲಿ ಕೆಲವರು ಮೃತಪಟ್ಟರೆ, ಮತ್ತೆ ಕೆಲವರು ಟ್ರಕ್ ಹರಿದು ಸಾವಿಗೀಡಾದರು ಎಂದೂ ಅವರು ತಿಳಿಸಿದ್ದಾರೆ.

ಹಮಾಸ್ ನಿಯಂತ್ರಣದಲ್ಲಿರುವ ಗಾಜಾದಲ್ಲಿರುವ ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯವು ನೀಡಿರುವ ಅಂಕಿಅಂಶದ ಪ್ರಕಾರ, ಈ ದುರ್ಘಟನೆಯಲ್ಲಿ 104 ಮಂದಿ ಮತಪಟ್ಟರೆ, ಸುಮಾರು 700 ಮಂದಿ ಗಾಯಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಮಿಲಿಟರಿ ವಕ್ತಾರರು, ಸಾವಿನ ಸಂಖ್ಯೆ ಬಗ್ಗೆ ಅಸ್ಪಷ್ಟತೆ ಇದ್ದು, ಅದನ್ನು ಖಚಿತಪಡಿಸುವುದಿಲ್ಲ ಎಂದಿದ್ದಾರೆ. ಎರಡು ಪ್ರತ್ಯೇಕ ಟ್ರಕ್‌ಗಳ ಅವಘಡ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಆಹಾರ ಟ್ರಕ್ ಬಳಿಗೆ ಜನ ಗುಂಪು ಗುಂಪಾಗಿ ಧಾವಿಸಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ಆ ಸಂದರ್ಭ ಅವರ ಮೇಲೆ ಟ್ರಕ್ ಹರಿದಿದೆ. ಈ ಸಂದರ್ಭ ಪ್ಯಾಲೆಸ್ಟೀನ್‌ನ ಜನರ ಗುಂಪು ಇಸ್ರೇಲ್ ಮಿಲಿಟರಿ ಗಮನ ಸೆಳೆದಾಗ ಗುಂಪು ಚದುರಿಸಲು ಗುಂಡು ಹಾರಿಸಲಾಗಿದೆ ಎಂದಿದ್ದಾರೆ.

ಆಹಾರ ವಿತರಣೆ ಟ್ರಕ್ ಮೇಲೆ ದಾಳಿ ಮಾಡಲಾಗಿದೆ ಎಂಬ ಆರೋಪ ತಳ್ಳಿಹಾಕಿದ ಇಸ್ರೇಲ್ ರಕ್ಷಣಾ ಪಡೆಗಳ(ಐಡಿಎಫ್) ವಕ್ತಾರ ಡ್ಯಾನಿಯಲ್ ಹರ್ಗರಿ, ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಟ್ರಕ್ ಮೇಲೆ ದಾಳಿ ಮಾಡಿಲ್ಲ. ನಾವು ದಾಳಿ ಮಾಡಿಲ್ಲ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಲು ಬಯಸುತ್ತೇನೆ. ಮಾನವೀಯ ನೆರವಿನ ನಿರ್ವಹಣೆಗಾಗಿ ಐಡಿಎಫ್ ಅಲ್ಲಿ ಇತ್ತು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT