ಇಸ್ಲಾಮಾಬಾದ್: ನೈರುತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿನ ಸೇನಾ ಕಾವಲು ಪಡೆಯ ಮೇಲೆ ಶಸ್ತ್ರಸಜ್ಜಿತ ಉಗ್ರರು ಬುಧವಾರ ನಸುಕಿನಲ್ಲಿ ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
ಭಯೋತ್ಪಾದಕರ ಗುಂಪೊಂದು ಉತ್ತರ ಪ್ರಾಂತ್ಯದಲ್ಲಿನ ಸೇನಾ ಕಾವಲು ಪಡೆ ಮೇಲೆ ದಾಳಿ ನಡೆಸಿತು. ಸೇನೆಯು ನಡೆಸಿದ ಪ್ರತಿ ದಾಳಿಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ಹೇಳಿದೆ.
ಗುಂಡಿನ ಚಕಮಕಿಯಿಂದ ದಾರಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಐವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ್ ಉಗ್ರಗಾಮಿ ಗುಂಪು ದಾಳಿಯ ಹೊಣೆ ಹೊತ್ತಿದೆ. ಆದರೆ ಯಾವುದೇ ಮಾಹಿತಿ ನೀಡಿಲ್ಲ.
ಬಲೂಚಿಸ್ತಾನದ ಮುಖ್ಯಮಂತ್ರಿ ಅಬ್ದುಲ್ ಖುದ್ದೂಸ್ ಬಿಜೆಂಜೊ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ.