ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಂಟ್ ಎವರೆಸ್ಟ್ ಏರಿ 70ನೇ ವರ್ಷ; 2023ರಲ್ಲಿ ಶಿಖರವೇರಿದ 478 ಸಾಹಸಿಗಳು

Published 29 ಡಿಸೆಂಬರ್ 2023, 13:19 IST
Last Updated 29 ಡಿಸೆಂಬರ್ 2023, 13:19 IST
ಅಕ್ಷರ ಗಾತ್ರ

ಕಠ್ಮಂಡು: ತಾಪಮಾನ ಏರಿಕೆ, ಕರಗುತ್ತಿರುವ ನೀರ್ಗಲ್ಲುಗಳು, ಪ್ರತಿಕೂಲ ಹವಾಮಾನದಂತ ಅಪಾಯದ ನಡುವೆಯೂ 478 ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಏರುವ ಮೂಲಕ ಶಿಖರ ಏರಿದ 70ನೇ ವರ್ಷದ ಸಂಭ್ರಮದ ಭಾಗವಾಗಿದ್ದಾರೆ.

ನ್ಯೂಜಿಲೆಂಡ್‌ನ ಎಡ್ಮಂಡ್‌ ಹಿಲೇರಿ ಹಾಗೂ ನೇಪಾಳದ ಶೇರ್ಪಾ ತೇನ್‌ಸಿಂಗ್ ನೋರ್ಗೆ ಅವರು 8,848.86 ಮೀಟರ್‌ (29,032 ಅಡಿ) ಎತ್ತರದ ಮೌಂಟ್ ಎವರೆಸ್ಟ್‌ ಅನ್ನು 1953ರ ಮೇ 29ರಂದು ಏರಿದ್ದರು. ಅದಾದ ನಂತರ ಭಾರತ ಮತ್ತು ನೇಪಾಳ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳ ಪರ್ವತಾರೋಹಿಗಳನ್ನು ಆಕರ್ಷಿಸಿತು. 1953ಯಲ್ಲಿ ಹಿಲೇರಿ–ನಾರ್ಗೇ ಅವರು ಮೌಂಟ್ ಎವರೆಸ್ಟ್‌ ಏರಿದ ನಂತರ, ಇಲ್ಲಿಯವರೆಗೆ 7 ಸಾವಿರ ಜನ ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ್ದಾರೆ. ಸುಮಾರು 300 ಜನ ಪ್ರಾಣ ಕಳೆದುಕೊಂಡಿದ್ದಾರೆ.

2023ರಲ್ಲಿ 103 ಮಹಿಳೆಯರೂ ಸೇರಿದಂತೆ ಒಟ್ಟು 478 ಜನ ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಏರಿದ್ದಾರೆ. ಇವರಲ್ಲಿ ಯಾಶಿ ಜೈನ್, ಮಿಥಿಲ್ ರಾಜು, ಸುನೀಲ್ ಕುಮಾರ್ ಮತ್ತು ಪಿಂಕಿ ಹ್ಯಾರೀಸ್ ಚಡ್ಡಾ ಭಾರತೀಯರು. ಇವರು ಮೇ 17ರಂದು ಶಿಖರ ಏರಿದ್ದರು.

ಸುಝೇನ್ ಲಿಯೋಪಾಲ್ಟಿನಾ ಎಂಬ ಭಾರತೀಯ ಪರ್ವತಾರೋಹಿಯೊಬ್ಬರು ಎವರೆಸ್ಟ್‌ ಬೇಸ್ ಕ್ಯಾಂಪ್‌ ಬಳಿ ಮೃತಪಟ್ಟಿದ್ದರು. ಇವರಿಗೆ ಪೇಸ್‌ ಮೇಕರ್‌ ಅಳವಡಿಸಲಾಗಿತ್ತು. ನಾಲ್ಕು ನೇಪಾಳಿಗಳು, ಭಾರತ ಮತ್ತು ಚೀನಾದ ತಲಾ ಒಬ್ಬರು ಒಳಗೊಂಡಂತೆ ಒಟ್ಟು 11 ಜನ 2023ರಲ್ಲಿ ಮೃತಪಟ್ಟಿದ್ದಾರೆ. ಎಂಟು ಜನ ನಾಪತ್ತೆಯಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.

ನೇಪಾಳದ ಕಾಮಿ ರಿಟಾ ಶೆರ್ಪಾ (53) ಅವರು ಈವರೆಗೂ 28 ಬಾರಿ ಪ್ರಪಂಚದ ಅತ್ಯಂತ ಎತ್ತರದ ಶಿಖರ ಏರಿ ದಾಖಲೆ ನಿರ್ಮಿಸಿದ್ದಾರೆ. ಇವರು ಶೇರ್ಪಾ ಮಾರ್ಗದರ್ಶಕರಾಗಿದ್ದರು. ಶೇರ್ಪಾ ಪಸಂಗ್‌ ದವಾ ಅವರು 26 ಬಾರಿ ಶಿಖರ ಏರಿದ್ದಾರೆ. 

ಆದರೆ ಈ ರೀತಿ ದಾಖಲೆ ನಿರ್ಮಿಸುವಲ್ಲಿ ಶೇರ್ಪಾ ಸಮುದಾಯದವರು ಮಾತ್ರವಲ್ಲದೇ, ಬ್ರಿಟಿಷ್‌ನ ಗೂರ್ಖಾ ಸೇನೆಯ ಮಾಜಿ ಅಧಿಕಾರಿ ಹರಿ ಬುದ್ಧಮಗರ್ ಅವರು ಕೃತಕ ಕಾಲಿನಲ್ಲಿ ಎವರೆಸ್ಟ್‌ ಏರಿ ದಾಖಲೆ ನಿರ್ಮಿಸಿದ್ದಾರೆ.

ಆದರೆ ಈವರೆಗೂ ಶೇರ್ಪಾ ಸಮುದಾಯದ ನೆರವಿಲ್ಲದೇ ಯಾವೊಬ್ಬ ಪರ್ವತಾರೋಹಿಯೂ ಈ ಎತ್ತರದ ಹಿಮಾಚ್ಛಾದಿತ ಶಿಖರವನ್ನು ಏರಿಲ್ಲ. ಅತ್ಯಂತ ದುರ್ಗಮ ಹಾದಿಯಲ್ಲಿ ಸಾಗಲು ಈ ಸಮುದಾಯದ ಜನರ ಅನುಭವ ಪರ್ವತಾರೋಹಿಗಳ ಪಾಲಿನ ಕಂದೀಲು ಆಗಿದೆ.

ಈವರ್ಷ 466 ಪರ್ವತಾರೋಹಿಗಳಿಗೆ ನೇಪಾಳ ಅನುಮತಿ ನೀಡಿತ್ತು. ಇವರಲ್ಲಿ 40 ಮಂದಿ ಭಾರತೀಯರೂ ಸೇರಿದ್ದಾರೆ. ಇವರೊಂದಿಗೆ 65 ವಿವಿಧ ರಾಷ್ಟ್ರಗಳ ಸಾಹಸಿಗಳು ಪಾಲ್ಗೊಂಡಿದ್ದರು. ಇದು ಈವರೆಗಿನ ದಾಖಲೆಯಾಗಿದೆ. 2021ರಲ್ಲಿ 409, 2022ರಲ್ಲಿ 323 ಜನರಿಗೆ ಪರವಾನಗಿ ನೀಡಲಾಗಿತ್ತು. ಇದು ನೇಪಾಳಕ್ಕೆ ಉತ್ತಮ ಆದಾಯವನ್ನೂ ತಂದುಕೊಡುತ್ತಿದೆ.

ಮತ್ತೊಂದೆಡೆ ನೀರ್ಗಲ್ಲುಗಳು ಕರಗುತ್ತಿವೆ. ಕಳೆದ ಆರು ದಶಕದಲ್ಲಿ 79 ನೀರ್ಗಲ್ಲುಗಳ ಗಾತ್ರ 100 ಮೀಟರ್‌ನಷ್ಟು ಕರಗಿದೆ. 2009ರಿಂದ ಇದು ತೆಳುಗೊಳ್ಳುವ ಪ್ರಕ್ರಿಯೆ ಇನ್ನೂ ಕಡಿಮೆಯಾಗಿದೆ ಎಂದು ಅಂತರರಾಷ್ಟ್ರೀಯ ಅಂತರ್ಗತ ಪರ್ವತ ಅಭಿವೃದ್ಧಿ ಕೇಂದ್ರವು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT