ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಾಜ್‌ ಷರೀಫ್‌ಗೆ ಏಳು ವರ್ಷ ಜೈಲು

Last Updated 24 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಅಲ್‌ ಅಜೀಜಿಯಾ ಸ್ಟೀಲ್‌ ಮಿಲ್‌ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರಿಗೆ ಸೋಮವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಜೊತೆಗೆ ಫ್ಲ್ಯಾಗ್‌ಷಿಪ್‌ ಇನ್‌ವೆಸ್ಟ್‌ಮೆಂಟ್‌ ಭ್ರಷ್ಟಾಚಾರ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಿದೆ.

ಈ ಎರಡು ಪ್ರಕರಣಗಳ ವಿಚಾರಣೆ ನಡೆಸಿರುವ ಅಕೌಂಟಬಿಲಿಟಿ ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್‌ ಹರ್ಷಾದ್‌ ಮಲಿಕ್‌ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ₹17.53 ಕೋಟಿ (2.5 ಮಿಲಿಯನ್ ಅಮೆರಿಕ ಡಾಲರ್‌) ದಂಡ ಕೂಡ ವಿಧಿಸಲಾಗಿದೆ.

ಅಲ್‌ ಅಜೀಜಿಯಾ ಪ್ರಕರಣದಲ್ಲಿ 68 ವರ್ಷದ ನವಾಜ್‌ ವಿರುದ್ಧ ಬಲವಾದ ಸಾಕ್ಷ್ಯಗಳಿದ್ದವು ಎಂದು ನ್ಯಾಯಾಧೀಶ ಮಲಿಕ್‌ ಅವರು ತಿಳಿಸಿದ್ದಾರೆ.

ಷರೀಫ್‌ ಅವರು ತಮ್ಮ ವಕೀಲರ ಜೊತೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತೀರ್ಪು ಪ್ರಕಟಿಸುತ್ತಿದ್ದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಯಾವ ಜೈಲಿನಲ್ಲಿ ಇರಿಸಲಾಗುವುದು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.

ಪನಾಮ ಪೇಪರ್ಸ್‌ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ಷರೀಫ್‌ ಅವರನ್ನು ಸುಪ್ರೀಂ ಕೋರ್ಟ್‌ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿತ್ತು.

ಅನಂತರ ಅವರ ವಿರುದ್ಧದ ಅವೆನ್‌ಫೀಲ್ಡ್‌ ಪ್ರಾಪರ್ಟೀಸ್‌, ಫ್ಲ್ಯಾಗ್‌ಷಿಪ್‌ ಇನ್‌ವೆಸ್ಟ್‌ಮೆಂಟ್‌ ಮತ್ತು ಅಲ್‌ ಅಜೀಜಿಯಾ ಸ್ಟೀಲ್‌ ಮಿಲ್‌ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ನ್ಯಾಷನಲ್ ಅಕೌಂಟೆಬಿಲಿಟಿ ಬ್ಯುರೊಗೆ (ಎನ್ಎಬಿ) ಒಪ್ಪಿಸಲಾಗಿತ್ತು.

ಲಂಡನ್‌ನಲ್ಲಿ ಐಷರಾಮಿ ಫ್ಲ್ಯಾಟ್‌ಗಳನ್ನು ಖರೀದಿಸಿರುವುದಕ್ಕೆ ಸಂಬಂಧಿಸಿರುವ ಅವೆನ್‌ಫೀಲ್ಡ್‌ ಪ್ರಕರಣದಲ್ಲಿ ಷರೀಫ್‌ ಅವರಿಗೆ ನ್ಯಾಯಾಲಯವು ಜುಲೈನಲ್ಲಿ 11 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಇದೇ ಪ್ರಕರಣದಲ್ಲಿ ಅವರ ಪುತ್ರಿ ಮರಿಯಂಗೆ ಎಂಟು ವರ್ಷ ಹಾಗೂ ಅಳಿಯ ಎಂ. ಸಫ್ದಾರ್‌ ಅವರಿಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಇಸ್ಲಾಮಾಬಾದ್‌ ಹೈಕೋರ್ಟ್‌ ಈ ಮೂವರಿಗೆ ಜಾಮೀನು ನೀಡಿತ್ತು.

ಷರೀಫ್‌ ವಿರುದ್ಧದ ಎರಡು ಪ್ರಕರಣಗಳ ವಿಚಾರಣೆಯನ್ನು ಡಿಸೆಂಬರ್‌ 24ರೊಳಗೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್‌ ಗಡುವು ವಿಧಿಸಿತ್ತು.

ನ್ಯಾಯಾಲಯದ ಹೊರಗಡೆ ಷರೀಫ್‌ ಬೆಂಬಲಿಗರು ಬಾರಿ ಸಂಖ್ಯೆಯಲ್ಲಿ ನೆರೆದಿದ್ದರು. ತೀರ್ಪು ಹೊರಬೀಳುತ್ತಿದ್ದಂತೆ ಷರೀಫ್‌ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ಪ್ರತಿಭಟನೆ ನಡೆಸಿದವರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಲಾಗಿದೆ.

‘ನನಗೆ ಯಾವುದೇ ಭಯವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಪ್ರಾಮಾಣಿಕವಾಗಿ ದೇಶಕ್ಕಾಗಿ ದುಡಿದಿದ್ದೇನೆ’ ಎಂದು ಷರೀಫ್‌ ಅವರು ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ತಿಳಿಸಿದ್ದರು.

* ನನಗೆ ಯಾವುದೇ ಭಯವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಪ್ರಾಮಾಣಿಕವಾಗಿ ದೇಶಕ್ಕಾಗಿ ದುಡಿದಿದ್ದೇನೆ

-ನವಾಜ್‌ ಷರೀಫ್‌,ಪಾಕಿಸ್ತಾನದ ಪದಚ್ಯುತ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT