ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದ ಪ್ರಧಾನಿಯಾಗಿ ಶೇರ್‌ ಬಹದ್ದೂರ್ ದೇವುಬಾರನ್ನು ನೇಮಿಸಿ: ನ್ಯಾಯಾಲಯ ಆದೇಶ

Last Updated 12 ಜುಲೈ 2021, 8:43 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ಸುಪ್ರೀಂ ಕೋರ್ಟ್‌ ಐದು ತಿಂಗಳೊಳಗೆ ಎರಡನೇ ಬಾರಿಗೆ ವಿಸರ್ಜಿತ ಸಂಸತ್ತನ್ನು ಮರುಸ್ಥಾಪಿಸಿದ್ದು, ನೇಪಾಳಿ ಕಾಂಗ್ರೆಸ್‌ ಅಧ್ಯಕ್ಷ ಶೇರ್‌ ಬಹದ್ದೂರ್ ದೇವುಬಾ ಅವರನ್ನು ಎರಡು ದಿನದೊಳಗೆ ಪ್ರಧಾನಿಯನ್ನಾಗಿ ನೇಮಕ ಮಾಡಬೇಕೆಂದು ಆದೇಶ ನೀಡಿದೆ.

ಸುಪ್ರೀಂ ಕೋರ್ಟ್‌ನ 5 ಸದಸ್ಯರ ಸಂವಿಧಾನ ಪೀಠ ಸೋಮವಾರ ನೀಡಿರುವ ಈ ತೀರ್ಪು ಹಾಲಿ ಅಲ್ಪಸಂಖ್ಯಾತ ಸರ್ಕಾರದ ನೇತೃತ್ವ ವಹಿಸಿರುವ ಕೆ.ಪಿ.ಶರ್ಮಾ ಒಲಿ ಅವರಿಗೆ ಆಗಿರುವ ಭಾರಿ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಮ್ಶೇರ್‌ ರಾಣಾ ನೇತೃತ್ವದ ನ್ಯಾಯಪೀಠ ಕಳೆದ ವಾರವೇ ವಿಚಾರಣೆಯನ್ನು ಪೂರ್ಣಗೊಳಿಸಿತ್ತು.

ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಐದು ತಿಂಗಳೊಳಗೆ ಎರಡನೇ ಬಾರಿಗೆ ಮೇ 22ರಂದು 275 ಸದಸ್ಯ ಬಲದ ಸಂಸತ್ತನ್ನು ವಿಸರ್ಜಿಸಿದ್ದರು ಹಾಗೂ ಪ್ರಧಾನಿ ಒಲಿ ಅವರ ಸಲಹೆಯಂತೆ ನವೆಂಬರ್‌ 12 ಮತ್ತು 19ರಂದು ಚುನಾವಣೆ ನಡೆಯಲಿದೆ ಎಂದು ಪ್ರಕಟಿಸಿದ್ದರು. ಕಳೆದ ವಾರ ಚುನಾವಣಾ ಆಯೋಗವೂ ಮಧ್ಯಂತರ ಚುನಾವಣಾ ದಿನಾಂಕ ಪ್ರಕಟಿಸಿತ್ತು.

ಅಧ್ಯಕ್ಷರು ಸಂಸತ್ತನ್ನು ವಿಸರ್ಜಿಸಿದ್ದನ್ನು ಪ್ರಶ್ನಿಸಿ ನೇಪಾಳಿ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ ಸಹಿತ 30 ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು.

ಕಳೆದ ವರ್ಷ ಡಿಸೆಂಬರ್ 20ರಂದು ಅಧ್ಯಕ್ಷೆ ಭಂಡಾರಿ ಅವರು ಸಂಸತ್ತನ್ನು ವಿಸರ್ಜಿಸುವ ಮೂಲಕ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಆರಂಭವಾಗಿತ್ತು. ಫೆಬ್ರುವರಿ 23ರಂದು ಸುಪ್ರೀಂ ಕೋರ್ಟ್‌ ವಿಸರ್ಜಿತ ಸಂಸತ್ತನ್ನು ಮರುಸ್ಥಾಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT