ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮನ್ ಲೇಖಕಿ ಜೋಕಾಗೆ ಮ್ಯಾನ್‌ ಬೂಕರ್ ಪ್ರಶಸ್ತಿ

Last Updated 22 ಮೇ 2019, 19:48 IST
ಅಕ್ಷರ ಗಾತ್ರ

ಲಂಡನ್‌: ಒಮನ್‌ನ ಲೇಖಕಿ ಜೋಕಾ ಅಲ್‌ಹರ್ತಿ ಅವರು ಪ್ರತಿಷ್ಠಿತ ‘ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರ ‘ಸೆಲೆಸ್ಟಿಯಲ್‌ ಬಾಡೀಸ್‌’ ಎಂಬ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಅರೇಬಿಕ್‌ ಭಾಷೆಯ ಸಾಹಿತಿಯೊಬ್ಬರು ಇದೇ ಮೊದಲ ಬಾರಿಗೆ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ.

ಜೋಕಾ ಅವರು ತಮ್ಮ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದ ಮಾಡಿರುವ ಬ್ರಿಟನ್‌ ಮೂಲದ ಮೆರಿಲಿನ್‌ ಬೂಥ್‌ ಅವರೊಂದಿಗೆ ಬಹುಮಾನದ ಮೊತ್ತ ₹ 44 ಲಕ್ಷ (50 ಸಾವಿರ ಪೌಂಡ್) ಹಂಚಿಕೊಳ್ಳಲಿದ್ದಾರೆ. ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಅರೇಬಿಕ್‌ ಸಾಹಿತ್ಯ ಅಧ್ಯಯನ ಮಾಡಿರುವ ಜೋಕಾ ಸದ್ಯ ಮಸ್ಕತ್‌ನ ಸುಲ್ತಾನ್‌ ಕಬೂಸ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ.

ಅರೇಬಿಯಾದಲ್ಲಿ ರೂಢಿಯಲ್ಲಿದ್ದ ಗುಲಾಮಗಿರಿ ವಿರುದ್ಧ ಮೂವರು ಸಹೋದರಿಯರು ಹೋರಾಟ ನಡೆಸುವ, ಗುಲಾಮಗಿರಿಯಿಂದ ಆ ದೇಶ ಆಧುನಿಕ ಜಗತ್ತಿಗೆ ತೆರೆದುಕೊಂಡ ಬಗೆಯನ್ನು ಅವರು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

‘ಶ್ರೀಮಂತಿಕೆಯಿಂದ ಕೂಡಿರುವ ಅರೇಬಿಯಾದ ಸಂಸ್ಕೃತಿಯನ್ನು ಹೊರಜಗತ್ತಿಗೆ ಪರಿಚಯಿಸಲು ಹೊಸ ಬಾಗಿಲು ತೆರೆದಂತಾಗಿದೆ. ಈ ಪ್ರಶಸ್ತಿ ದೊರೆತಿರುವುದು ಅತೀವ ಸಂತಸವನ್ನುಂಟು ಮಾಡಿದೆ’ ಎಂದು 40 ವರ್ಷದ ಜೋಕಾ ಪ್ರತಿಕ್ರಿಯಿಸಿದ್ದಾರೆ.

‘ನನ್ನ ಕೃತಿ ಗುಲಾಮಗಿರಿ ಕುರಿತು ಒಳನೋಟ ನೀಡುತ್ತದೆ. ಮೂವರು ಯುವತಿಯರ ಮೂಲಕ ತೆರೆದುಕೊಳ್ಳುವ ಕಥೆ ಒಮನ್‌ನ ಸಾಮಾಜಿಕ ಜೀವನದಲ್ಲಿನ ಸ್ಥಿತ್ಯಂತರವನ್ನು ವಿವರಿಸುತ್ತದೆ. ಇಂತಹ ಕ್ಲಿಷ್ಟಕರ ವಿಷಯಗಳನ್ನು ಜನರಿಗೆ ತಲುಪಿಸಲು ಸಾಹಿತ್ಯವೇ ಸೂಕ್ತ ವೇದಿಕೆಯಾಗಬಲ್ಲದು’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT