ಪೇಶಾವರ: ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪೊಲೀಸ್ ಠಾಣೆಯೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಮಗುವೊಂದು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೇಶಾವರದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಸ್ವಾಬಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯ ಮೊದಲ ಮಹಡಿಯಲ್ಲಿರುವ ಡಿಪೊದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳು ಪೊಲೀಸರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಟ್ಟಡವನ್ನು ಅವರಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಠಾಣೆಯಲ್ಲಿ ನಡೆದ ಸ್ಫೋಟ ಭಯೋತ್ಪಾದಕ ಕೃತ್ಯವಲ್ಲ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತೀಯ ಸರ್ಕಾರಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
‘ಕಾರ್ಯಾಚರಣೆಗಳ ವೇಳೆ ವಶಪಡಿಸಿಕೊಳ್ಳಲಾದ ಸ್ಫೋಟಕಗಳನ್ನು ಠಾಣೆಯಲ್ಲಿ ಅಸಮರ್ಪಕವಾಗಿ ಸಂಗ್ರಹಿಸಿಡಲಾಗಿತ್ತು. ಅವು ಆಕಸ್ಮಿಕವಾಗಿ ಸ್ಫೋಟಗೊಂಡಿವೆ’ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.