ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪಾಕ್‌ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ’

‘ಸಿಇಸಿ, ಮುಖ್ಯ ನ್ಯಾಯಮೂರ್ತಿಯೂ ಭಾಗಿ * ಹಿರಿಯ ಅಧಿಕಾರಿ ಆರೋಪ, ರಾಜೀನಾಮೆ
Published 17 ಫೆಬ್ರುವರಿ 2024, 15:42 IST
Last Updated 17 ಫೆಬ್ರುವರಿ 2024, 15:42 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಚುನಾವಣಾ ಆಯೋಗದ ಮುಖ್ಯ ಆಯುಕ್ತ, ಮುಖ್ಯ ನ್ಯಾಯಮೂರ್ತಿ ಈಚೆಗೆ ಮುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಈ ಆರೋಪದ ಹಿಂದೆಯೇ, ‘ಕರ್ತವ್ಯಲೋಪದ ಹೊಣೆಗಾರಿಕೆ’ ಹೊತ್ತುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಆ ಹಿರಿಯ ಅಧಿಕಾರಿ ಹೇಳಿದ್ದಾರೆ. 

ರಾವಲ್ಪಿಂಡಿಯ ಮಾಜಿ ಆಯುಕ್ತ ಲಿಯಾಖತ್ ಅಲಿ ಛತ್ತಾ ಆರೋಪ ಮಾಡಿದ್ದು, ಅಕ್ರಮಗಳ ಮೂಲಕ ಸೋಲಬೇಕಾಗಿದ್ದ ಅಭ್ಯರ್ಥಿಗಳನ್ನು ‘ಗೆಲ್ಲಿಸಲಾಗಿದೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಆರೋಪಿಸಿದರು. 

ಮುಖ್ಯ ನ್ಯಾಯಮೂರ್ತಿ, ಮುಖ್ಯ ಚುನಾವಣಾ ಆಯುಕ್ತ ಇದರಲ್ಲಿ ಭಾಗಿಯಾಗಿದ್ದಾರೆ. ದೇಶದ ಬೆನ್ನಿಗೆ ಇರಿಯುವುದನ್ನು ನೋಡಲಾಗುತ್ತಿಲ್ಲ. ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು. ರಾಜಕಾರಣಿಗಳಿಗಾಗಿ ಕರ್ತವ್ಯಲೋಪ ಎಸಗಬೇಡಿ ಎಂದು ಅಧಿಕಾರಿ ಸಮುದಾಯಕ್ಕೆ ಕೋರುತ್ತೇನೆ’ ಎಂದು ಹೇಳಿದ್ದಾಗಿ ‘ಡಾನ್‌’ ದೈನಿಕವು ವರದಿ ಮಾಡಿದೆ.

ಆದರೆ, ಈ ಆರೋಪವನ್ನು ಚುನಾವಣಾ ಆಯೋಗವು ನಿರಾಕರಿಸಿದೆ. ಹೇಳಿಕೆ ನೀಡಿರುವ ಆಯೋಗ, ಫಲಿತಾಂಶ ಬದಲಿಸುವಂತೆ ಆಯೋಗದ ಯಾವುದೇ ಅಧಿಕಾರಿ ಯಾರೊಬ್ಬರಿಗೂ ನಿರ್ದೇಶನ ನೀಡಿಲ್ಲ ಎಂದು ಹೇಳಿದೆ.

ಆದರೆ, ಅಕ್ರಮ ಸಂಬಂಧ ಅಧಿಕಾರಿಯ ಆರೋಪಗಳ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.

ದಿನದ ಬೆಳವಣಿಗೆಗಳು:

* ಮೈತ್ರಿ ಸರ್ಕಾರ ರಚಿಸಲು ನವಾಜ್ ಷರೀಫ್‌ ನೇತೃತ್ವದ ಪಿಎಂಎಲ್‌–ಎನ್‌ ಮತ್ತು ಬಿಲಾವಲ್‌ ಭುಟ್ಟೊ ನೇತೃತ್ವದ ಪಿಪಿಪಿ ಪ್ರಯತ್ನ ಮುಂದುವರಿಸಿವೆ. ಈ ಪಕ್ಷಗಳು ಕ್ರಮವಾಗಿ 75 ಮತ್ತು 54 ಸ್ಥಾನ ಗೆದ್ದಿವೆ. ಅಲ್ಲದೆ, 17 ಸ್ಥಾನ ಗೆದ್ದಿರುವ ಎಂಕ್ಯೂಎಂ–ಪಿ ಕೂಡಾ ಮೈತ್ರಿಕೂಟ ಬೆಂಬಲಿಸಲು ತೀರ್ಮಾನಿಸಿದೆ.

* ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಇಮ್ರಾನ್‌ ಖಾನ್ ನೇತೃತ್ವದ ಪಿಟಿಐ ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

* ಚುನಾವಣಾ ಅಕ್ರಮ ಖಂಡಿಸಿ ತಾನು ವಿರೋಧಪಕ್ಷಸಾಲಿನಲ್ಲೇ ಇರಲು ನಿರ್ಧರಿಸಿರುವುದಾಗಿ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ (ಪಿಟಿಐ) ಶನಿವಾರ ಪ್ರಕಟಿಸಿದೆ. ಪಿಟಿಐ ಬೆಂಬಲಿತರು 265 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 93ರಲ್ಲಿ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT