ಇಸ್ಲಾಮಾಬಾದ್: ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕ್ಷಮೆಯಾಚಿಸಲು ನಿರಾಕರಿಸಿದ್ದು, ಹಿಂಸಾಚಾರಕ್ಕೆ ಸೇನೆಯೇ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಮೇ 9ರಂದು ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯದ ಆವರಣದಿಂದ ಮೇಜರ್ ನೇತೃತ್ವದ ಸೇನೆಯು ಖಾನ್ ಅವರನ್ನು ಬಂಧಿಸಿತ್ತು.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಶನಿವಾರ ಮಾದ್ಯಮಗೋಷ್ಠಿಯಲ್ಲಿ ಮಾತಾನಾಡಿದ ಖಾನ್, ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.
ಖಾನ್ ಬಂಧನ ವಿರೋಧಿಸಿ ಪಾಕಿಸ್ತಾನ ತೆಹ್ರೀಕ್–ಎ–ಇನ್ಸಾಫ್ ಪಕ್ಷದ ಬೆಂಬಲಿಗರು ರಾಷ್ಟ್ರವ್ಯಾಪ್ತಿ ಪ್ರತಿಭಟನೆ ಮತ್ತು ಗಲಭೆ ನಡೆಸಿದ್ದರು.
ಮೇ 7ರಂದು ಸೇನೆಯ ವಕ್ತಾರ ಮೇಜರ್ ಅಹ್ಮದ್ ಷರೀಫ್, ‘ತನ್ನ ಅರಾಜಕತೆಯ ರಾಜಕೀಯಕ್ಕಾಗಿ ಪಕ್ಷವು ಕ್ಷಮೆಯಾಚಿಸಿದರೆ ಮಾತ್ರ ಪಕ್ಷದೊಂದಿಗೆ ಯಾವುದೇ ಮಾತುಕತೆಗೆ ನಡೆಸಬಹುದು’ ಎಂದು ಹೇಳಿದ್ದರು.
ನಂತರ, ‘ಬ್ಲಾಕ್ ಡೇ ಹಿಂಸಾಚಾರ’ಕ್ಕಾಗಿ ಖಾನ್ ಕ್ಷಮೆಯಾಚಿಸಬೇಕು ಎಂದು ಹಲವು ವಲಯಗಳಿಂದ ಕರೆ ಬಂದಿತ್ತು.