ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

24 ವರ್ಷಗಳ ಬಳಿಕ ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್‌

Published 19 ಜೂನ್ 2024, 4:50 IST
Last Updated 19 ಜೂನ್ 2024, 4:50 IST
ಅಕ್ಷರ ಗಾತ್ರ

ಸೋಲ್: 24 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಇಂದು (ಬುಧವಾರ) ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದಾರೆ.

ಪಿಯೊಂಗ್ಯಾಂಗ್‌ನ ವಿಮಾನ ನಿಲ್ದಾಣದಲ್ಲಿ ಪುಟಿನ್‌ನನ್ನು ಉತ್ತರ ಕೊರಿಯಾದ ನಾಯಕ ಕಿಮ್‌ ಜೊಂಗ್ ಉನ್ ಬರಮಾಡಿಕೊಂಡರು. ಈ ವೇಳೆ ಇಬ್ಬರು ಪರಸ್ಪರ ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಅಮೆರಿಕದ ನೇತೃತ್ವದಲ್ಲಿ ವಿವಿಧ ರಾಷ್ಟ್ರಗಳು ವಿಧಿಸಿರುವ ನಿರ್ಬಂಧವನ್ನು ರಷ್ಯಾ ಮತ್ತು ಉತ್ತರ ಕೊರಿಯಾ ಪರಸ್ಪರ ಸಹಕಾರದಿಂದ ಎದುರಿಸಬಹುದಾಗಿದೆ’ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅಭಿಪ್ರಾಯಪಟ್ಟಿದ್ದಾರೆ.

ಪುಟಿನ್ ಅವರ ವಿದೇಶಾಂಗ ನೀತಿ ಸಲಹೆಗಾರ ಯೂರಿ ಉಶಕೋವ್ ಪ್ರಕಾರ, ಉಪ ಪ್ರಧಾನ ಮಂತ್ರಿ ಡೆನಿಸ್ ಮಾಂಟ್ರುರೊವ್, ರಕ್ಷಣಾ ಸಚಿವ ಆಂಡ್ರೇ ಬೆಲೌಸೊವ್ ಮತ್ತು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು, ಉಭಯ ರಾಷ್ಟ್ರಗಳ ನಡುವೆ ಮಿಲಿಟರಿ ಸೇರಿದಂತೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಿವೆ ಎಂದು ಹೇಳಿದ್ದಾರೆ.

‘ರಷ್ಯಾ ಮತ್ತು ಉತ್ತರ ಕೊರಿಯಾ ತಮ್ಮದೇ ಆದ ವ್ಯಾಪಾರ ಮತ್ತು ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿವೆ. ಪಶ್ಚಿಮ ರಾಷ್ಟ್ರಗಳ ನಿಯಂತ್ರಣಕ್ಕೆ ಒಳಪಡದೆ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಪಶ್ಚಿಮ ರಾಷ್ಟ್ರಗಳ ನಿಯಂತ್ರಣ ಮಾದರಿಯೇ ಏಕಪಕ್ಷೀಯ ಹಾಗೂ ಅಕ್ರಮವಾದುದು. ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಷ್ಯಾ–ಉತ್ತರ ಕೊರಿಯಾ ಪರಸ್ಪರ ಸಹಕಾರವನ್ನು ವಿಸ್ತರಿಸಲಿವೆ’ ಎಂದು ಪುಟಿನ್‌ ತಿಳಿಸಿದ್ದರು.

ಅಣ್ವಸ್ತ್ರ, ಕ್ಷಿಪಣಿ ಕಾರ್ಯಕ್ರಮಗಳ ಕಾರಣಕ್ಕೆ ಉತ್ತರ ಕೊರಿಯಾ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆರ್ಥಿಕ ನಿರ್ಬಂಧವನ್ನು ಹೇರಿದೆ. ಉಕ್ರೇನ್‌ ಮೇಲಿನ ಅತಿಕ್ರಮಣದ ಕಾರಣದಿಂದಾಗಿ ರಷ್ಯಾ ಮೇಲೆ ಅಮೆರಿಕ ಮತ್ತಿತರ ರಾಷ್ಟ್ರಗಳು ನಿರ್ಬಂಧ ಹೇರಿವೆ.

ಉತ್ತರ ಕೊರಿಯಾದ ನಾಯಕ ಕಿಮ್ 2019ರಲ್ಲಿ ರಷ್ಯಾಗೆ ಭೇಟಿ ನೀಡಿದ್ದರು. ಆ ಬಳಿಕ ಉಭಯ ದೇಶಗಳ ನಡುವೆ ಆರ್ಥಿಕ, ಭದ್ರತಾ ವಲಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಚಟುವಟಿಕೆಗಳು ಗಣನೀಯವಾಗಿ ಏರಿಕೆಯಾಗಿವೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT