ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಉತ್ತರ ಕೊರಿಯಾದಿಂದ ರಷ್ಯಾಕ್ಕೆ 7 ಸಾವಿರ ಕಂಟೈನರ್‌ ಯುದ್ಧ ಸಾಮಗ್ರಿ’

Published 18 ಮಾರ್ಚ್ 2024, 16:48 IST
Last Updated 18 ಮಾರ್ಚ್ 2024, 16:48 IST
ಅಕ್ಷರ ಗಾತ್ರ

ಸೋಲ್: ‘ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ಉತ್ತರ ಕೊರಿಯಾವು ಕಳೆದ ವರ್ಷದಿಂದಲೂ ಶಸ್ತ್ರಾಸ್ತ್ರಗಳು ಮತ್ತು ಇತರ ಮಿಲಿಟರಿ ಉಪಕರಣಗಳನ್ನೊಳಗೊಂಡ ಸುಮಾರು 7 ಸಾವಿರ ಕಂಟೇನರ್‌ಗಳನ್ನು ರಷ್ಯಾಗೆ ರವಾನಿಸಿದೆ’ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವರು ಸೋಮವಾರ ತಿಳಿಸಿದ್ದಾರೆ.

ಜಪಾನ್‌ ಮಿಲಿಟರಿಯೊಂದಿಗೆ ಜಂಟಿಯಾಗಿ ಅತ್ಯಲ್ಪ ದೂರದ ಖಂಡಾಂತರ ಕ್ಷಿಪಣಿಗಳನ್ನು ಪೂರ್ವ ತೀರದಲ್ಲಿ ಯಶಸ್ವಿಯಾಗಿ ಉಡ್ಡಯನಗೊಳಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿಯು ಪ್ರಕಟಿಸಿದ ಕೆಲವೇ ಗಂಟೆಗಳ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿನ್‌ ವೊನ್–ಸಿಕ್ ಈ ವಿಷಯ ತಿಳಿಸಿದರು.

ಉಕ್ರೇನ್‌ ವಿರುದ್ಧದ ಯುದ್ಧಕ್ಕಾಗಿ ಉತ್ತರ ಕೊರಿಯಾವು ಈಚೆಗೆ ರಷ್ಯಾಕ್ಕೆ ಫಿರಂಗಿ ಶೆಲ್‌ಗಳು, ಕ್ಷಿಪಣಿಗಳು ಮತ್ತು ಇನ್ನಿತರ ಯುದ್ಧೋಪಕರಣಗಳನ್ನು ಪೂರೈಸುತ್ತಿದೆ ಎಂದು ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಅಧಿಕಾರಿಗಳು ಆರೋಪಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ನಡೆದ ಶೃಂಗಸಭೆಯ ನಂತರ ಶಸ್ತ್ರಾಸ್ತ್ರಗಳ ವರ್ಗಾವಣೆ ವೇಗ ಪಡೆದುಕೊಂಡಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾವು ತನ್ನ ಪಡೆಗಳ ಉನ್ನತೀಕರಣಕ್ಕೆ ಅವಶ್ಯವಿರುವ ಮಿಲಿಟರಿ ಉಪಕರಣ, ಆರ್ಥಿಕ ನೆರವು ಹಾಗೂ ಆಹಾರವನ್ನು ಪಡೆಯುತ್ತಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ಮತ್ತು ಉತ್ತರ ಕೊರಿಯಾವು ಈ ಆರೋಪವನ್ನು ನಿರಾಕರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT