ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ಇಲ್ಲ: ಸರ್ಕಾರ ಸ್ಪಷ್ಟನೆ

ರಾಷ್ಟ್ರೀಯ ತುರ್ತು ಪರಿಸ್ಥಿತಿ ತೆರವು l ಹಿಂಸಾಚಾರ ಕೊನೆಗೊಳಿಸಲು ಜನರಲ್ಲಿ ಮನವಿ
Last Updated 7 ಏಪ್ರಿಲ್ 2022, 1:42 IST
ಅಕ್ಷರ ಗಾತ್ರ

ಕೊಲಂಬೊ: ದ್ವೀಪರಾಷ್ಟ್ರದಲ್ಲಿ ಹೇರಲಾಗಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಮಂಗಳವಾರ ತಡರಾತ್ರಿ ಹಿಂತೆಗೆದುಕೊಂಡಿದ್ದಾರೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರಾಜಪಕ್ಸ ಅವರು ಯಾವ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸರ್ಕಾರ ಬುಧವಾರ ಹೇಳಿದೆ.

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಹೆಚ್ಚಿದ್ದರಿಂದ ಏಪ್ರಿಲ್ 1ರಂದು ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆಯೋಜನೆಯಾಗಿದ್ದ ಸರಣಿ ಪ್ರತಿಭಟನೆಗಳನ್ನು ನಿಗ್ರಹಿಸಲು ದೇಶದಾದ್ಯಂತ ಕರ್ಫ್ಯೂ ಹೇರಲಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿತ್ತು. ಗೊಟಬಯ ಅವರು ರಾಜೀನಾಮೆ ನೀಡಬೇಕು ಎಂಬ ಕೂಗು ಪ್ರಬಲವಾಗಿತ್ತು.

ರಾಜೀನಾಮೆ ಬೇಡಿಕೆಯನ್ನು ತಳ್ಳಿಹಾಕಿರುವ ಸರ್ಕಾರ, ಗೊಟಬಯ ಅವರು ಪರಿಸ್ಥಿತಿಯನ್ನು ಎದುರಿಸಲಿದ್ದಾರೆ ಎಂದು ತಿಳಿಸಿದೆ. ಸರ್ಕಾರವು ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಮರ್ಥವಾಗಿದ್ದು, ಚುನಾವಣೆ ಮೂಲಕ ಆಯ್ಕೆಯಾಗಿರುವ ಗೊಟಬಯ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಜಾನ್ಸನ್ ಫರ್ನಾಂಡೋ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಉಂಟಾಗಿರುವ ಹಿಂಸಾಚಾರಕ್ಕೆ ಜನತಾ ವಿಮುಕ್ತಿ ಪೆರಮುನವಾಸ್ (ಜೆವಿಪಿ) ಪಕ್ಷವೇ ಕಾರಣ ಎಂದು ಆರೋಪಿಸಿರುವ ಫರ್ನಾಂಡೋ, ಹಿಂಸಾಚಾರ ಕೊನೆಗೊಳಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಎಂತಹ ಕಠಿಣ ನಿರ್ಧಾರಗಳನ್ನು ಬೇಕಾದರೂ ತೆಗೆದುಗೊಳ್ಳಲು ಭದ್ರತಾ ಪಡೆಗಳಿಗೆ ಅವಕಾಶ ನೀಡುವ ತುರ್ತು ಪರಿಸ್ಥಿತಿ ಹೇರಿಕೆ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಅಧ್ಯಕ್ಷರ ಕಚೇರಿ ಹಾಗೂ ಇತರ ಸಾರ್ವಜನಿಕ ಸ್ಥಳಗಳ ಮೇಲಿನ ದಾಳಿಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸರ್ಕಾರ ತಿಳಿಸಿದೆ.

ಅಡುಗೆ ಅನಿಲ, ಪೆಟ್ರೋಲ್, ವಿದ್ಯುತ್, ಹಾಲಿನಪುಡಿ ಮೊದಲಾದ ಜೀವನಾವಶ್ಯಕ ವಸ್ತುಗಳ ತೀವ್ರ ಕೊರತೆಯನ್ನು ಖಂಡಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಗೊಟಬಯ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದರು.

ರಾಯಭಾರ ಕಚೇರಿ ಬಂದ್: ಹಣಕಾಸಿನ ತೀವ್ರ ಮುಗ್ಗಟ್ಟು ಎದುರಿಸುತ್ತಿರುವ ಶ್ರೀಲಂಕಾ, ನಾರ್ವೆ ಹಾಗೂ ಇರಾಕ್‌ನಲ್ಲಿರುವ ತನ್ನ ರಾಯಭಾರ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರ ತೆಗೆದುಕೊಂಡಿದೆ. ಹಾಗೆಯೇ ಸಿಡ್ನಿಯಲ್ಲಿರುವ ಕಾನ್ಸುಲ್ ಜನರಲ್ ಕಚೇರಿಯನ್ನೂ ಕೆಲಕಾಲ ಬಂದ್ ಮಾಡಲು ನಿರ್ಧರಿಸಿದೆ.

***

ಸರ್ಕಾರಕ್ಕೆ ಈಗ ಮುಂದೆ ಹೋಗುವುದು ಅಸಾಧ್ಯ. ಎಲ್ಲರನ್ನೂ ಒಳಗೊಂಡ ಸರ್ಕಾರವು ಆರು ತಿಂಗಳು ಆಡಳಿತ ನಡೆಸಿದ ಬಳಿಕ ಚುನಾವಣೆಗೆ ಹೋಗುವುದು ಸರಿಯಾದ ಆಯ್ಕೆಯಾಗುತ್ತದೆ.

- ನಾನಯಕ್ಕರ, ಡಿಎಲ್‌ಎಫ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT