ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

India Greece Relations | ಬಾಂಧವ್ಯ, ವಾಣಿಜ್ಯ ವಹಿವಾಟು ವೃದ್ಧಿಗೆ ಆದ್ಯತೆ

ಗ್ರೀಕ್‌ ಅಧ್ಯಕ್ಷ, ಪ್ರಧಾನಿ ಜೊತೆಗೆ ಮೋದಿ ವಿಸ್ತೃತ ಚರ್ಚೆ
Published 25 ಆಗಸ್ಟ್ 2023, 15:40 IST
Last Updated 25 ಆಗಸ್ಟ್ 2023, 15:40 IST
ಅಕ್ಷರ ಗಾತ್ರ

ಅಥೆನ್ಸ್‌: ಭಾರತ ಮತ್ತು ಗ್ರೀಕ್‌ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಹಾಗೂ 2030ರ ವೇಳೆಗೆ ವಾಣಿಜ್ಯ ವಹಿವಾಟು ಪ್ರಮಾಣವನ್ನು ದುಪ್ಪಟ್ಟುಗೊಳಿಸಲು ತೀರ್ಮಾನಿಸಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರೀಕ್‌ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರ ನಡುವೆ ಶುಕ್ರವಾರ ಇಲ್ಲಿ ನಡೆದ ದ್ವಿಪಕ್ಷೀಯ ಚರ್ಚೆಯಲ್ಲಿ ಈ ಕುರಿತು ತೀರ್ಮಾನಕ್ಕೆ ಬರಲಾಗಿದೆ. 

ಬ್ರಿಕ್ಸ್‌ ಸಭೆಯ ಬಳಿಕ ದಕ್ಷಿಣ ಆಫ್ರಿಕಾದಿಂದ ಇಲ್ಲಿಗೆ ಆಗಮಿಸಿದ ಮೋದಿ ಅವರು ಪ್ರತ್ಯೇಕವಾಗಿ ಗ್ರೀಕ್‌ ಅಧ್ಯಕ್ಷೆ ಕಟೆರಿನ ಎನ್‌ ಸಕೆಲ್ಲಾರೊಪೌಲೌ ಮತ್ತು ಪ್ರಧಾನಿ ಅವರನ್ನು ಭೇಟಿಯಾಗಿ ಚರ್ಚಿಸಿದರು.

ರಕ್ಷಣಾ ಕ್ಷೇತ್ರ, ಭದ್ರತೆ, ಮೂಲಸೌಕರ್ಯ, ಕೃಷಿ, ಶಿಕ್ಷಣ ಮತ್ತು ಹೊಸ ತಂತ್ರಜ್ಞಾನದ ಅನ್ವೇಷಣೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಲು ತೀರ್ಮಾನಿಸಲಾಗಿದೆ ಎಂದು ಮೋದಿ ಹೇಳಿದರು.

ಉಕ್ರೇನ್‌ ಬಿಕ್ಕಟ್ಟು ಬಗೆಹರಿಸಲು ಭಾರತ ಮತ್ತು ಗ್ರೀಕ್ ರಾಷ್ಟ್ರಗಳು ರಾಜತಾಂತ್ರಿಕ ಹಂತದ ಮಾತುಕತೆಗೆ ಬೆಂಬಲ ನೀಡಲಿವೆ ಎಂದು ‍ಮೋದಿ ಹೇಳಿದರು. ಈ ಸಂದರ್ಭದಲ್ಲಿ ಗ್ರೀಕ್‌ ಪ್ರಧಾನಿ ಅವರು ಜೊತೆಗಿದ್ದು ಸಹಮತ ವ್ಯಕ್ತಪಡಿಸಿದರು. 

ಮಾತುಕತೆಗೆ ಸ್ಪಷ್ಟ ರೂಪನೀಡಲು ರಾಷ್ಟ್ರೀಯ ಭದ್ರತಾ ಸಲಹೆಗಾರರ ಹಂತದಲ್ಲಿ ಸಾಂಸ್ಥಿಕ ಚರ್ಚೆ ನಡೆಯಲಿದೆ ಎಂದು ಮೋದಿ ಹೇಳಿದರು. ಗ್ರೀಕ್‌ ಪ್ರಧಾನಿ ಇದಕ್ಕೆ, ವಿವಿಧ ಸವಾಲುಗಳನ್ನು ಎದುರಿಸಲು ಒಟ್ಟಿಗೆ ಮುನ್ನಡೆಯಲು ಸಿದ್ಧ ಎಂದು ದನಿಗೂಡಿಸಿದರು.

ಭಯೋತ್ಪಾದನೆ ಹತ್ತಿಕ್ಕುವುದು, ಸೈಬರ್ ಭದ್ರತೆ ಕುರಿತು ವಿಸ್ತೃತ ಮಾತುಕತೆ ಬಳಿಕ ಒಪ್ಪಂದಕ್ಕೆ ಬರಲಾಗುವುದು. ಇದರ ಜೊತೆಗೆ ಡಿಜಿಟಲ್‌ ಪಾವತಿ, ಫಾರ್ಮಾ, ಪ್ರವಾಸೊದ್ಯಮ, ಸಂಸ್ಕೃತಿ, ಶಿಕ್ಷಣ ಕುರಿತು ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಕಳೆದ 40 ವರ್ಷಗಳಲ್ಲಿ ಗ್ರೀಕ್‌ಗೆ ಭೇಟಿ ನೀಡಿದ್ದ ಭಾರತದ ಪ್ರಥಮ ಪ್ರಧಾನಿ ಎಂಬ ಹಿರಿಮೆಗೂ ಅವರು ಮೋದಿ ಪಾತ್ರರಾದರು. ಮೋದಿ ಅವರು ಅಧ್ಯಕ್ಷೆ ಕಟೆರಿನಾ ಎನ್‌ ಸಕೆಲ್ಲಾರೊಪೌಲೌ ಜೊತೆಗೂ ಚರ್ಚಿಸಿದರು.

ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಉನ್ನತ ಮಟ್ಟದ ನಿಯೋಗ ಗ್ರೀಕ್‌ಗೆ ಸೆಪ್ಟೆಂಬರ್‌ 1983ರಲ್ಲಿ ಭೇಟಿ ನೀಡಿತ್ತು.

‘ಚಂದ್ರಯಾನ ಮನುಕುಲದ ಯಶಸ್ಸು’ 

ಅಥೆನ್ಸ್: ‘ಚಂದ್ರಯಾನ –3ರ ಯಶಸ್ಸು  ಕೇವಲ ಭಾರತದ ವಿಜಯವಲ್ಲ ಇಡೀ ಮನುಕುಲದ ಗೆಲುವು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಖ್ಯಾನಿಸಿದ್ದಾರೆ. ಶುಕ್ರವಾರ ಇಲ್ಲಿಗೆ ಆಗಮಿಸಿದ ಪ್ರಧಾನಿ ಅವರು ಗ್ರೀಕ್‌ ಅಧ್ಯಕ್ಷೆ ಕಟೆರಿನಾ ಎನ್‌ ಸಕೆಲ್ಲಾರೊಪೌಲೌ ಅವರ ಜೊತೆಗೆ ಚರ್ಚಿಸಿದರು. ಆಗ ಗ್ರೀಕ್‌ ಅಧ್ಯಕ್ಷೆಯು ಚಂದ್ರಯಾನ ಯಶಸ್ಸಿಗಾಗಿ ಅಭಿನಂದಿಸಿದಾಗ ಪ್ರತಿಕ್ರಿಯೆಯಾಗಿ ಈ ಮಾತು ಹೇಳಿದರು. ಚಂದ್ರಯಾನ–3 ಯೋಜನೆಯಿಂದ ಸಂಗ್ರಹಿಸುವ ದತ್ತಾಂಶಗಳು ವಿಜ್ಞಾನ ಕ್ಷೇತ್ರದ ಸಮುದಾಯ ಹಾಗೂ ಇಡೀ ಮನುಕುಲಕ್ಕೆ ನೆರವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT