ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ: ಸಂಭ್ರಮಾಚರಣೆಗೆ ಅಮೆರಿಕದ ದೇವಾಲಯಗಳು ಸಜ್ಜು

Published 20 ಜನವರಿ 2024, 4:42 IST
Last Updated 20 ಜನವರಿ 2024, 4:42 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಆಚರಿಸಲು ಅಮೆರಿಕದ ನೂರಾರು ದೇವಾಲಯಗಳು ಸಜ್ಜಾಗುತ್ತಿವೆ. ಸಂಭ್ರಮಾಚರಣೆಯ ಪ್ರಯುಕ್ತ ಈ ವಾರಾಂತ್ಯದಲ್ಲಿ ಪ್ರಾರಂಭಗೊಳ್ಳುವ ಕಾರ್ಯಕ್ರಮಗಳಲ್ಲಿ ಸಾವಿರಾರು ಭಾರತೀಯ ಅಮೆರಿಕನ್ನರು ಭಾಗವಹಿಸುವ ಸಾಧ್ಯತೆಯಿದೆ.

‘ಅಯೋಧ್ಯೆಯು ವಿನಾಶ ಮತ್ತು ನಿರ್ಲಕ್ಷ್ಯದಿಂದ ಪುನಃ ಉದಯಿಸುತ್ತಿದೆ. ಇದು ಸನಾತನ ಧರ್ಮದ ಶಾಶ್ವತ ಸ್ವರೂಪವನ್ನು ಬಿಂಬಿಸುತ್ತದೆ. 550 ವರ್ಷಗಳ ನಂತರ ಮಂದಿರದಲ್ಲಿ ನಡೆಯಲಿರುವ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯು ಪ್ರಪಂಚದಾದ್ಯಂತ ಇರುವ ಸುಮಾರು ಒಂದು ಶತಕೋಟಿ ಹಿಂದೂಗಳಿಗೆ ಅಪಾರ ಸಂತೋಷವನ್ನು ಉಂಟು ಮಾಡಿದೆ’ ಎಂದು ಅಮೆರಿಕದ ಹಿಂದೂ ವಿಶ್ವವಿದ್ಯಾಲಯದ ಅಧ್ಯಕ್ಷ ಕಲ್ಯಾಣ್‌ ವಿಶ್ವನಾಥನ್‌ ತಮ್ಮ ಬ್ಲಾಗ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘500 ವರ್ಷಗಳ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ರಾಮ ದೇವರ ಮಂದಿರ ನಿರ್ಮಾಣವು ವಿಶ್ವದಾದ್ಯಂತ ಇರುವ ಹಿಂದೂಗಳ ನಂಬಿಕೆ ಮತ್ತು ಆಚರಣೆಯ ಪ್ರಮುಖ ದಿನವಾಗಿದೆ’ ಎಂದು ಟೆಕ್ಸಾಸ್‌ನ ಶ್ರೀ ಸೀತಾ ರಾಮ ಫೌಂಡೇಶನ್‌ನ ಕಪಿಲ್‌ ಶರ್ಮಾ ಹೇಳಿದ್ದಾರೆ.

ರಾಮ ಪ್ರಾಣ ಪ್ರತಿಷ್ಠಾಪನೆ ಸಂಭ್ರಮಾಚರಣೆಯನ್ನು ಹೂಸ್ಟನ್‌ನ ದೇವಾಲಯದಲ್ಲಿ ಆಯೋಜಿಸಲಾಗಿದೆ. ಆಚರಣೆಯು ಸುಂದರಕಾಂಡದೊಂದಿಗೆ ಪ್ರಾರಂಭಗೊಳ್ಳಲಿದ್ದು, ನೃತ್ಯ, ಗಾಯನ ಮತ್ತು ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ರಾಮ ದೇವರ ಮೆರವಣಿಗೆ ಮತ್ತು ಪ್ರಸಾದ ವಿತರಣೆಯಲ್ಲಿ ಕೊನೆಗೊಳ್ಳಲಿದೆ ಎಂದು ಶರ್ಮಾ ತಿಳಿಸಿದ್ದಾರೆ.

ವಾಷಿಂಗ್ಟನ್‌ ಡಿಸಿಯ ಉಪನಗರದಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮಾಚರಣೆಯಲ್ಲಿ ಮೇರಿಲ್ಯಾಂಡ್‌ ಗವರ್ನರ್‌ ವೆಸ್‌ ಮೋರೆ ಭಾಗವಹಿಸಲಿದ್ದಾರೆ. ಅಲ್ಲದೆ, ಆಚರಣೆಯಲ್ಲಿ ಕೆಲವು ಪಾಕಿಸ್ತಾನಿ ಅಮೆರಿಕನ್ನರು ಪಾಲ್ಗೊಳ್ಳಲಿದ್ದಾರೆ.

‘ಶ್ರೀ ರಾಮನ ಲಕ್ಷಾಂತರ ಅನುಯಾಯಿಗಳ ಬಹುನಿರೀಕ್ಷಿತ ಕನಸು ನನಸಾಗಲಿದೆ. ಅಮೆರಿಕದಲ್ಲಿ ಸುಮಾರು 1,000 ದೇವಾಲಯಗಳಿವೆ. ಎಲ್ಲಾ ದೇವಾಲಯಗಳಲ್ಲಿಯೂ ಐತಿಹಾಸಿಕ ಸಂದರ್ಭವನ್ನು ಆಚರಿಸಲು ಈ ವಾರಾಂತ್ಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಅಮೆರಿಕದ ವಿಶ್ವ ಹಿಂದೂ ಪರಿಷತ್ತಿನ ಅಮಿತಾಬ್‌ ಮಿತ್ತಲ್‌ ಹೇಳಿದ್ದಾರೆ.

20ಕ್ಕೂ ಹೆಚ್ಚು ನಗರಗಳಲ್ಲಿ ಕಾರು ರ‍್ಯಾಲಿಗಳನ್ನು ಆಯೋಜಿಲಾಗಿದೆ. ಕ್ಯಾಲಿರ್ಫೋರ್ನಿಯಾದಲ್ಲಿ 600ಕ್ಕೂ ಹೆಚ್ಚು ಕಾರುಗಳು ರ‍್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT