ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೀಯ ರೇಸ್‌ನಲ್ಲಿ ತುಳಸಿ

Last Updated 12 ನವೆಂಬರ್ 2018, 19:46 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನ ಮೊದಲ ಹಿಂದೂ ಸಂಸದೆ ತುಳಸಿ ಗಬ್ಬಾರ್ಡ್ ಅವರು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತುಳಸಿ ಅವರು ಅಮೆರಿಕದ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಖ್ಯಾತ ವೈದ್ಯ ಡಾ. ಸಂಪತ್ ಶಿವಾಂಗಿ ಅವರು ಲಾಸ್ ಏಂಜಲೀಸ್‌ನಲ್ಲಿ ಶುಕ್ರವಾರ ನಡೆದ ಸಮಾವೇಶವೊಂದರಲ್ಲಿ ಘೋಷಿಸಿದರು. ಇದಕ್ಕೆ ಸಭಿಕರು ಎದ್ದುನಿಂತು ಚಪ್ಪಾಳೆ ತಟ್ಟಿದರು.

ಸಮಾವೇಶದಲ್ಲಿ ಮಾತನಾಡಿದ ಗಬ್ಬಾರ್ಡ್, ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದನ್ನು ನಿರಾಕರಿಸಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ. ಕ್ರಿಸ್‌ಮಸ್ ಒಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಶುರುವಾಗಿದೆ ತಯಾರಿ!

ಚುನಾವಣಾ ಪ್ರಚಾರಕ್ಕಾಗಿ ದೇಣಿಗೆ ಸಂಗ್ರಹಿಸಲು ತುಳಸಿ ಅವರ ಬೆಂಬಲಿಗರು ಸದ್ದಿಲ್ಲದೇ ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ದೊಡ್ಡ ಸಂಖ್ಯೆಯಲ್ಲಿರುವ ಭಾರತೀಯ ಅಮೆರಿಕನ್ನರು ಹಾಗೂ ಸಮರ್ಥ ಅಭಿಯಾನ ನಡೆಸಲು ಸ್ವಯಂಸೇವಕರನ್ನು ಸಂಪರ್ಕಿಸಲು ಸಿದ್ಧತೆ ನಡೆಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿರುವ ತುಳಸಿ, ಸದ್ಯ ಅಮೆರಿಕದ ಪ್ರಬಲ ಸಶಸ್ತ್ರ ಸೇವಾ ಸಮಿತಿ ಮತ್ತು ವಿದೇಶಾಂಗ ವ್ಯವಹಾರ ಸಮಿತಿಗಳಲ್ಲಿ ಸದಸ್ಯರಾಗಿದ್ದಾರೆ.

‘ತುಳಸಿ ಅವರು ಪಕ್ಷದ ಹೊಸ ಧ್ವನಿ. ಅಮೆರಿಕ–ಭಾರತ ಸಂಬಂಧಕ್ಕೆ ಬೆಂಬಲ, ಇರಾಕ್‌ ಯುದ್ಧಕ್ಕೆ ವಿರೋಧ, ಸೌದಿಗೆ ಶಸ್ತ್ರಾಸ್ತ ಮಾರಾಟಕ್ಕೆ ಆಕ್ಷೇಪ ಎತ್ತುವ ಮೂಲಕ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ’ ಎಂದು ಡಾ. ಶಿವಾಂಗಿ ಹೇಳಿದ್ದಾರೆ.

ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಾಥಮಿಕ ಚುನಾವಣೆಗಳು ಮುಂದಿನ ಫೆಬ್ರುವರಿ 3ರಿಂದ ಆರಂಭವಾಗಲಿವೆ. ಲೋವಾ, ನ್ಯೂ ಹ್ಯಾಂಪ್‌ಶೈರ್, ನೆವಾಡ ಮತ್ತು ದಕ್ಷಿಣ ಕರೋಲಿನಾ ರಾಜ್ಯಗಳಲ್ಲಿ ಜನರನ್ನು ಸೆಳೆಯಲು ತುಳಸಿ ಅವರ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ.

ಭಾರತೀಯರ ನಿರ್ಣಾಯಕ ಪಾತ್ರ

ಅಮೆರಿಕದಲ್ಲಿ ಯಹೂದಿಗಳನ್ನು ಹೊರತುಪಡಿಸಿದರೆ ಭಾರತೀಯರೇ ಪ್ರಮುಖ ಜನಾಂಗೀಯ ಗುಂಪು ಎನಿಸಿದೆ. ಬಹುತೇಕ ರಾಜ್ಯಗಳ ಚುನಾವಣೆಗಳಲ್ಲಿ ಭಾರತೀಯ ಸಮುದಾಯವೇ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಡೆಮಾಕ್ರಟಿಕ್ ಪಕ್ಷದ ತುಳಸಿ ಗಬ್ಬಾರ್ಡ್ ರಾಜಕೀಯದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದಿದ್ದಾರೆ. ಕಳೆದ ವಾರವಷ್ಟೇ ಜನಪ್ರತಿನಿಧಿ ಸಭೆಗೆ (ರೆಪ್ರೆಸೆಂಟೆಟಿವ್ಸ್) ನಾಲ್ಕನೇ ಬಾರಿ ಆಯ್ಕೆಯಾಗಿದ್ದಾರೆ. ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲಿಗರು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದರು.

ಸಂಭಾವ್ಯ ಅಭ್ಯರ್ಥಿಗಳು

ಮಾಜಿ ಉಪಾಧ್ಯಕ್ಷ ಜೋ ಬಿಡೆನ್, ಸಂಸದೆ ಎಲಿಜಬೆತ್ ವಾರೆನ್, ಕಿರ್ಸ್ಟನ್ ಗಿಲ್ಲಿಬ್ರಾಂಡ್, ಆಮಿ ಕ್ಲೊಬುಚರ್, ಟಿಮ್ ಕೇನ್ ಮತ್ತು ಸಂಸದೆ ಕಮಲಾ ಹ್ಯಾರಿಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT