ಪೆಶಾವರ: ಪಾಕಿಸ್ತಾನದಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಉಗ್ರರ ದಾಳಿಗಳಲ್ಲಿ ಕನಿಷ್ಠ ನಾಲ್ವರು ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಪಡೆ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ದಕ್ಷಿಣ ಲಕ್ಕಿ ಮಾರ್ವತ್ ಜಿಲ್ಲೆಯ ಬರಗಾಯ್ ಪೊಲೀಸ್ ಠಾಣೆ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಠಾಣಾಧಿಕಾರಿ (ಎಸ್‌ಎಚ್‌ಒ) ಸೇರಿದಂತೆ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.
ದಾಳಿಯಿಂದ ಒಬ್ಬ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಎಸ್‌ಎಚ್‌ಒ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಾಳಿಗೂ ಮೊದಲು ಉಗ್ರರು ಠಾಣೆಯ ಸಮೀಪದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಉಗ್ರರು ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ಹೊಂಚುದಾಳಿ ನಡೆಸಿದರು. ಈ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.