ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ಇದೆ: ಗುರ್‌ದೀಪ್‌

Published 16 ಏಪ್ರಿಲ್ 2024, 15:43 IST
Last Updated 16 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದ ವಿದ್ಯಾರ್ಥಿಗಳಿಗೆ ಅಮೆರಿಕದಲ್ಲಿ ಈಗಲೂ ಕಲಿಕೆಗೆ ಉತ್ತಮ ವಾತಾವರಣವಿದೆ ಎಂದು ವರ್ಜಿನಿಯಾದ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಕಂಪ್ಯೂಟಿಂಗ್‌ನ ಡೀನ್‌ ಗುರ್‌ದೀಪ್‌ ಸಿಂಗ್‌ ಹೇಳಿದ್ದಾರೆ.

ಅಮೆರಿಕದಲ್ಲಿ ಇತ್ತೀಚೆಗೆ ಭಾರತ ಅಥವಾ ಭಾರತೀಯ ಮೂಲದ 11 ವಿದ್ಯಾರ್ಥಿಗಳ ಹತ್ಯೆ ಪ್ರಕರಣಗಳು ವರದಿಯಾಗಿದೆ. ಇದು ಭಾರತೀಯ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ, ಕಳವಳಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಭಾರತೀಯ– ಅಮೆರಿಕನ್‌ ಶಿಕ್ಷಣತಜ್ಞರಾದ ಸಿಂಗ್‌ ಅವರು ಈ ಕುರಿತು ಪಿಟಿಐ ಜತೆ ಮಾತನಾಡಿದ್ದಾರೆ. 

‘ಈ ಸಾವುಗಳಿಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಮಾದರಿಯನ್ನು ಸ್ಥಾಪಿಸಲಾಗಿಲ್ಲ. ಆದರೂ ಭಾರತೀಯ ರಾಜತಾಂತ್ರಿಕರು ವಿದ್ಯಾರ್ಥಿಗಳೊಂದಿಗೆ ಪೂರ್ವಭಾವಿಯಾಗಿ ಸಭೆ, ಸಂವಾದಗಳನ್ನು ನಡೆಸುತ್ತಿದ್ದು, ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಗಳಿವೆ’ ಎಂದು ಅವರು ಹೇಳಿದ್ದಾರೆ.

‘ಪೋಷಕರಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಸರಿ. ನಾನೂ ಪೋಷಕನಾಗಿದ್ದರೆ, ಹಾಗೆಯೇ ಕಾಳಜಿ ವಹಿಸುತ್ತಿದ್ದೆ. ಆದರೆ, ನಿರ್ದಿಷ್ಟ ವಿಶ್ವವಿದ್ಯಾಲಯದಲ್ಲಿ ಈ ರೀತಿಯ ಮೂರು ಅಥವಾ ನಾಲ್ಕು ಘಟನೆಗಳು ಅನುಕ್ರಮವಾಗಿ ನಡೆದಿದ್ದರೆ, ಅಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲ ಎನ್ನುವ ದೃಷ್ಟಿಕೋನದಲ್ಲಿ ನೋಡಬಹುದು. ಆಗ ಅಲ್ಲಿ ಒಂದು ಮಾದರಿಯ ಚಿತ್ರಣ ದೊರೆಯುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ಇದನ್ನು ಭಾರತೀಯ ವಿದ್ಯಾರ್ಥಿಗಳ ಮೇಲಿನ ದ್ವೇಷದ ಅಪರಾಧ ಎನ್ನಲು ಯಾವುದೇ ಕಾರಣ ನನಗೆ ಕಾಣುತ್ತಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ಇಂತಹ ಘಟನೆಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿ ಇರಬೇಕು ಎಂದು ಸಿಂಗ್‌ ತಿಳಿಸಿದ್ದಾರೆ. ಯಾವುದೇ ದೇಶಗಳಲ್ಲಿನ ಕೆಲ ನಗರಗಳು ಅಥವಾ ಅವುಗಳಲ್ಲಿನ ಕೆಲ ಭಾಗಗಳಲ್ಲಿ ಅಪರಾಧ ಪ್ರಮಾಣ ಹೆಚ್ಚಿರುತ್ತದೆ. ಆದರೆ ಅದೃಷ್ಟವಶಾತ್‌ ಅಮೆರಿಕದಲ್ಲಿನ ವಿಶ್ವವಿದ್ಯಾಲಯ ಪಟ್ಟಣಗಳು ಹೆಚ್ಚು ಸುರಕ್ಷಿತವಾಗಿವೆ ಎಂದು ಅವರು ವಿವರಿಸಿದ್ದಾರೆ.

ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ವರದಿ ಪ್ರಕಾರ, ಅಮೆರಿಕದಲ್ಲಿ 2014–15ರಲ್ಲಿ 1.34 ಲಕ್ಷ ಇದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2024ರಲ್ಲಿ 3.54 ಲಕ್ಷಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT