ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ರಾಯಭಾರಿಗೆ ತಡೆ: ಸ್ಪಷ್ಟನೆ ನೀಡಿದ ಸ್ಕಾಟ್ಲೆಂಡ್‌ನ ಗುರುದ್ವಾರ

Published 1 ಅಕ್ಟೋಬರ್ 2023, 11:11 IST
Last Updated 1 ಅಕ್ಟೋಬರ್ 2023, 11:11 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರು ಸ್ಕಾಟ್ಲೆಂಡ್‌ನ ಗ್ಲಾಸ್ಗೊ ಗುರುದ್ವಾರಕ್ಕೆ ಪ್ರವೇಶಿಸುವುದನ್ನು ಕೆಲ ದುಷ್ಕರ್ಮಿಗಳು ತಡೆದ ಬಗ್ಗೆ ಗ್ಲಾಸ್ಗೊ ಗುರುದ್ವಾರದ ಪ್ರಧಾನ ಕಾರ್ಯದರ್ಶಿ ಪ್ರಭ್ಜೋತ್ ಕೌರ್ ಸ್ಪಷ್ಟನೆ ನೀಡಿದ್ದಾರೆ.

‘ಸೆಪ್ಟೆಂಬರ್ 29ರಂದು ಗ್ಲಾಸ್ಗೊ ಗುರುದ್ವಾರದ ಬಳಿ ಈ ಘಟನೆ ನಡೆದಿದೆ. ಸ್ಕಾಟಿಷ್ ಸಂಸತ್ ಸದಸ್ಯರೊಬ್ಬರು ಭಾರತೀಯ ಹೈಕಮಿಷನರ್ ಖಾಸಗಿ ಭೇಟಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಗುರುದ್ವಾರದ ಹೊರಗೆ ಇದ್ದ ಕೆಲ ಅಪರಿಚಿತ ವ್ಯಕ್ತಿಗಳು ಹೈಕಮಿಷನರ್ ಅವರಿಗೆ ಅಡ್ಡಿಮಾಡಿದ್ದಾರೆ. ಆ ಕೂಡಲೇ ಹೈಕಮಿಷನರ್ ಅವರು ಆವರಣವನ್ನು ತೊರೆದಿದ್ದಾರೆ. ಅವರ ನಿರ್ಗಮನದ ನಂತರ, ಆ ವ್ಯಕ್ತಿಗಳು ಗುರುದ್ವಾರದ ಸಭೆಗೂ ತೊಡಕು ಮಾಡಲು ಯತ್ನಿಸಿದ್ದಾರೆ. ಈ ಕುರಿತಂತೆ ಸ್ಕಾಟ್ಲೆಂಡ್ ಪೊಲೀಸರು ಗಮನಹರಿಸಿದ್ದಾರೆ. ಸಿಖ್ ಆರಾಧನಾ ಸ್ಥಳದ ಶಾಂತಿಯುತ ಪ್ರಕ್ರಿಯೆಗೆ ಅಡ್ಡಿಪಡಿಸುವ ಇಂತಹ ವರ್ತನೆಯನ್ನು ಗ್ಲಾಸ್ಗೊ ಗುರುದ್ವಾರವು ಬಲವಾಗಿ ಖಂಡಿಸುತ್ತದೆ. ಗುರುದ್ವಾರವು ಎಲ್ಲ ಸಮುದಾಯಗಳು ಮತ್ತು ವಿಭಿನ್ನ ಹಿನ್ನೆಲೆಯ ಜನರಿಗೆ ತೆರೆದಿರುತ್ತದೆ. ನಮ್ಮ ನಂಬಿಕೆಯ ತತ್ವಗಳ ಪ್ರಕಾರ ನಾವು ಎಲ್ಲರನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ’ ಎಂದು ಪ್ರಭ್ಜೋತ್ ಕೌರ್ ಹೇಳಿದ್ದಾರೆ.

ಏನಿದು ಪ್ರಕರಣ?

ಬ್ರಿಟನ್‌ನಲ್ಲಿನ ಭಾರತದ ರಾಯಭಾರಿ ವಿಕ್ರಮ್‌ ದೊರೈಸ್ವಾಮಿ ಅವರು ಶನಿವಾರ ಸ್ಕಾಟ್ಲೆಂಡ್‌ನ ಗ್ಲಾಸ್ಗೊ ನಗರದ ಗುರುದ್ವಾರವೊಂದನ್ನು ಪ್ರವೇಶಿಸುವುದಕ್ಕೆ ಖಾಲಿಸ್ತಾನ ಪರ ತೀವ್ರಗಾಮಿಗಳ ಗುಂಪು ಅಡ್ಡಿ ಉಂಟು ಮಾಡಿತ್ತು.

ದೊರೈಸ್ವಾಮಿ ಅವರು ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಸ್ಕಾಟ್ಲೆಂಡ್‌ನ ಗ್ಲಾಸ್ಗೊಗೆ ಬಂದಿದ್ದರು. ಇಲ್ಲಿನ ಆಲ್ಬರ್ಟ್‌ ಡ್ರೈವ್‌ನಲ್ಲಿಯ ಗುರು ಗ್ರಂಥ ಸಾಹಿಬ್‌ ಗುರುದ್ವಾರಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ‘ಸಿಖ್‌ ಯೂತ್ಸ್‌ ಯುಕೆ’ ಸಂಘಟನೆಯ ಸದಸ್ಯರು ಘಟನೆಯ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ದೊರೈಸ್ವಾಮಿ ಅವರಿಗೆ ಪ್ರವೇಶ ನೀಡದಂತೆ ಗುರುದ್ವಾರದ ಪ್ರಮುಖರ ಜೊತೆ ಸಂಘಟನೆಯ ಸದಸ್ಯರು ವಾಗ್ವಾದ ನಡೆಸಿದ್ದಾರೆ. ಸಂಘಟನೆಯ ಕೆಲವರು ರಾಯಭಾರಿಯ ಕಾರಿಗೆ ಮುತ್ತಿಗೆ ಹಾಕಿ, ಅಲ್ಲಿಂದ ಹೊರಡುವಂತೆ ಅವರಿಗೆ ಎಚ್ಚರಿಕೆ ನೀಡಿದ್ದು ಕೂಡ ವಿಡಿಯೊದಲ್ಲಿ ಇದೆ. ಈ ಪ್ರಕರಣ ಕುರಿತು ತನಿಖೆ ನಡೆದಿದೆ, ಯಾರಿಗೂ ಗಾಯಗಳಾದ ವರದಿ ಇಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

‘ಭಾರತದ ಯಾವುದೇ ರಾಯಭಾರಿ, ಭಾರತ ಸರ್ಕಾರದ ಯಾವುದೇ ಅಧಿಕಾರಿ ಯಾವುದೇ ಕಾರಣಕ್ಕೆ ಬಂದರೂ ನಾವು ಅವರನ್ನು ಹೀಗೆಯೇ ಎದುರುಗೊಳ್ಳಬೇಕಿದೆ’ ಎಂದು ವ್ಯಕ್ತಿಯೊಬ್ಬ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT