ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌ ಪರ ಪ್ರತಿಭಟನೆಗಳು ಶಾಂತಿಯುತವಾಗಿರಲಿ: ಶ್ವೇತಭವನ

Published 28 ಏಪ್ರಿಲ್ 2024, 16:03 IST
Last Updated 28 ಏಪ್ರಿಲ್ 2024, 16:03 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇಸ್ರೇಲ್‌ ಹಮಾಸ್‌ ಮೇಲೆ ನಡೆಸುತ್ತಿರುವ ಯುದ್ಧ ನಿಲ್ಲಿಸುವಂತೆ ಒತ್ತಾಯಿಸಿ ಕೆಲವು ವಾರಗಳಿಂದ ದೇಶದಲ್ಲಿ ಪ್ಯಾಲೆಸ್ಟೀನ್‌ ಪರವಾದ ಪ್ರತಿಭಟನೆಗಳು ಹೆಚ್ಚುತ್ತಿದ್ದು ಇದು ಅಮೆರಿಕದ ವಿಶ್ವವಿದ್ಯಾಲಯಗಳನ್ನು ಬೆಚ್ಚಿಬೀಳಿಸಿದೆ. ವಾರಾಂತ್ಯದಲ್ಲೇ ನಾಲ್ಕು ಪ್ರತ್ಯೇಕ ವಿ.ವಿಗಳ ಕ್ಯಾಂಪಸ್‌ಗಳಲ್ಲಿ ಪ್ಯಾಲೆಸ್ಟೀನ್‌ ಪರ ಪ್ರತಿಭಟನೆಗಳು ನಡೆದು, ಸುಮಾರು 275 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಈ ನಡುವೆ ಪ್ಯಾಲೆಸ್ಟೀನ್‌ ಪರವಾದ ಪ್ರತಿಭಟನೆಗಳು ಶಾಂತಿಯುತವಾಗಿರಬೇಕು. ದ್ವೇಷದ ಭಾಷಣ ಮತ್ತು ಹಿಂಸಾಚಾರದ ಬೆದರಿಕೆಗಳನ್ನು ಖಂಡಿತವಾಗಿ ಸಹಿಸುವುದಿಲ್ಲವೆಂದು ಶ್ವೇತಭವನವು ಭಾನುವಾರ ಎಚ್ಚರಿಸಿದೆ. 

‘ನಾವು ಖಂಡಿತವಾಗಿಯೂ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವ ಜನರ ಹಕ್ಕನ್ನು ಗೌರವಿಸುತ್ತೇವೆ. ಆದರೆ, ಯೆಹೂದಿ ವಿರೋಧಿ ಭಾಷೆಯನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ’ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಎಬಿಸಿಯ ‘ದಿಸ್‌ ವೀಕ್‌’ಗೆ ತಿಳಿಸಿದರು.

ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಮೊದಲು ಶುರುವಾದ ಪ್ರತಿಭಟನೆಗಳ ಅಲೆಯು ಈಗ ದೇಶದಾದ್ಯಂತ ವೇಗವಾಗಿ ಹರಡಿದೆ. ಕೆಲವು ವಿ.ವಿ ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ಶಾಂತವಾಗಿ ನಡೆದಿವೆ. ಕೆಲವೆಡೆ ಗಲಭೆಗಳನ್ನು ಹತ್ತಿಕ್ಕಲು ಪೊಲೀಸರು ಅಶ್ರುವಾಯು ಬಳಸಿದ್ದಾರೆ. ಬೋಸ್ಟನ್‌ನ ಈಶಾನ್ಯ ವಿಶ್ವವಿದ್ಯಾಲಯದಲ್ಲಿ 100, ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ 80, ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ 72 ಮತ್ತು ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ 23 ಮಂದಿ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ. 

ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಬಂಧಿಸಲ್ಪಟ್ಟವರಲ್ಲಿ ಗ್ರೀನ್ ಪಾರ್ಟಿಯ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಜಿಲ್ ಸ್ಟೈನ್ ಕೂಡ ಸೇರಿದ್ದಾರೆ.

‘ರಫಾ ಆಕ್ರಮಣ ವಿಪತ್ತು ತಡೆ

ಅಮೆರಿಕದಿಂದ ಮಾತ್ರ ಸಾಧ್ಯ’  ರಿಯಾದ್(ಎಎಫ್‌ಪಿ): ರಫಾ ಮೇಲಿನ ಇಸ್ರೇಲ್‌ ಆಕ್ರಮಣವು ಪ್ಯಾಲೆಸ್ಟೀನ್‌ ಇತಿಹಾಸದಲ್ಲಿ ಅತಿದೊಡ್ಡ ವಿಪತ್ತು. ಈ ವಿಪತ್ತು ತಡೆಯಲು ಸಾಮರ್ಥ್ಯವಿರುವ ಏಕೈಕ ರಾಷ್ಟ್ರವೆಂದರೆ ಅದು ಅಮೆರಿಕ ಮಾತ್ರ ಎಂದು ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮೂದ್ ಅಬ್ಬಾಸ್ ಭಾನುವಾರ ಹೇಳಿದ್ದಾರೆ.   ಸೌದಿ ರಾಜಧಾನಿಯಲ್ಲಿ ನಡೆದ ಜಾಗತಿಕ ಆರ್ಥಿಕ ಶೃಂಗಸಭೆಯಲ್ಲಿ ಮಾತನಾಡಿದ ಅಬ್ಬಾಸ್ ‘ರಫಾ ಮೇಲಿನ ಇಸ್ರೇಲ್ ಆಕ್ರಮಣ ನಿಲ್ಲಿಸುವಂತೆ ನಾವು ಅಮೆರಿಕಕ್ಕೆ ಮನವಿ ಮಾಡುತ್ತೇವೆ. ಏಕೆಂದರೆ ಇಸ್ರೇಲ್ ಈ ಅಪರಾಧ ಎಸಗದಂತೆ ತಡೆಯುವ ಏಕೈಕ ದೇಶ ಅಮೆರಿಕವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT