ವಾಷಿಂಗ್ಟನ್ (ಪಿಟಿಐ): ಉತ್ತರ ಕೊರಿಯಾ ನಾಯಕ ಕಿಮ್ ಜೋಂಗ್ ಉನ್ ಆರೋಗ್ಯದಿಂದ ಇರಲಿ ಎಂದು ಹಾರೈಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್ ಉನ್ ಅನಾರೋಗ್ಯಕ್ಕೆ ಒಳಗಾಗಿದ್ದು, ಗಂಭೀರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ವಾಷಿಂಗ್ಟನ್ನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು,ಕಿಮ್ ಆರೋಗ್ಯವಾಗಿರಲಿ ಎಂದು ಹಾರೈಸುವುದಾಗಿ ತಿಳಿಸಿದರು.
ಉತ್ತರ ಕೊರಿಯಾ ನಾಯಕ ಕಿಮ್ ಜೋಂಗ್ ಉನ್ ಗಂಭೀರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ವರದಿಗಳನ್ನು ಟ್ರಂಪ್ ಅಲ್ಲಗಳೆಯಲೂ ಅಥವಾ ದೃಢಪಡಿಸಲೂ ಇಲ್ಲ. ನಾನು ಕಿಮ್ ಜೊತೆಯಲ್ಲಿ ಉತ್ತಮ ಸಂಬಂಧ ಹೊಂದಿದ್ದೇನೆ. ಈಗ ಪ್ರಕಟವಾಗಿರುವ ವರದಿಗಳ ಪ್ರಕಾರ ಇಂತಹ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಅದು ಅತ್ಯಂತ ಗಂಭೀರ ಸ್ಥಿತಿಯಾಗಿದೆ.ಇಂತಹ ಪರಿಸ್ಥಿತಿಯಿಂದ ಹೊರಬರಲೆಂದು ಹಾರೈಸುತ್ತೇನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಗಾದ ನಂತರ ಉತ್ತರ ಕೊರಿಯಾದ ನಾಯಕ ಕಿಮ್ ಆರೋಗ್ಯ ಅಪಾಯದಲ್ಲಿದೆ ಎಂದು ಸೋಮವಾರ ಮಾಧ್ಯಮಗಳು ವರದಿ ಮಾಡಿದ್ದವು.ನಾನು ಕಿಮ್ ಜೋಂಗ್ ಉನ್ಗೆ ಶುಭ ಹಾರೈಸುತ್ತೇನೆ . ಉತ್ತಮ ಆರೋಗ್ಯದಿಂದ ಇರಲಿ. ಉತ್ತಮ ವೈದ್ಯಕೀಯ ವರದಿಗಳ ಜೊತೆ ಹೊರಬರಲಿ ಎಂದು ತಿಳಿಸಿದ್ದಾರೆ.