ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲೂ ಮೋದಿಗೆ ಜನಮನ್ನಣೆ

ಅಂಕಲ್ ಸ್ಯಾಮ್ ಅಂಗಳದಲ್ಲಿ ಮೋದಿ ಮೋಡಿ...
Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಭಾರತದ ಪ್ರಧಾನಿಗೆ ರಾಕ್ ಸ್ಟಾರ್ ಮಾದರಿಯ ಸ್ವಾಗತ’, ‘ಸಾಮಾಜಿಕ ಜಾಲತಾಣಗಳ ಪ್ರಸಿದ್ಧ ರಾಜಕಾರಣಿ ಮೋದಿ ಅಮೆರಿಕ ಭೇಟಿ ಆರಂಭ’. ಇವು ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಮತ್ತು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ­ಗಳಲ್ಲಿ, ಪ್ರಧಾನಿ ಮೋದಿ ಅಮೆರಿಕಕ್ಕೆ ಆಗಮಿಸಿದ ದಿನ ಪ್ರಕಟವಾದ ವರದಿಗಳ ಒಕ್ಕಣೆ.

ಐದು ದಿನಗಳ ಮೋದಿಯವರ ಅಮೆರಿಕ ಭೇಟಿಯಲ್ಲಿ ಬಿಡುವಿಲ್ಲದಷ್ಟು ಕಾರ್ಯಕ್ರಮಗಳು ಆಯೋಜನೆ­ಯಾಗಿದ್ದವು. ಪ್ರಧಾನಿ ಮೋದಿ ಕೂಡ ಉತ್ಸಾಹದಿಂದಲೇ ಎಲ್ಲ ಕಾರ್ಯಕ್ರಮ­ಗಳಲ್ಲೂ ಭಾಗಿಯಾದರು. ಸುಮಾರು 20 ತಾಸುಗಳ ದೀರ್ಘ ಪ್ರಯಾಣ ಮುಗಿಸಿ, ಅಜಮಾಸು ಏಳು ಸಾವಿರ ಮೈಲಿಗಳನ್ನು ಕ್ರಮಿಸಿ ಭಾರತದಿಂದ ಅಮೆರಿಕೆಗೆ ಬರುವ ಯಾರಿಗಾದರೂ ‘ಜೆಟ್ ಲಾಗ್’ ಕೊಡವಿಕೊಂಡು ಉತ್ಸಾಹ ತುಂಬಿಕೊಳ್ಳುವುದಕ್ಕೇ ಹಲವು ಗಂಟೆಗಳು ಬೇಕಾಗುತ್ತವೆ.

ಆದರೆ, ಮೋದಿಯವರಿಗೆ ಹೆಚ್ಚು ಸಮಯ ಬೇಕಾ­­ದಂತೆ ಕಾಣಲಿಲ್ಲ. ನ್ಯೂಯಾರ್ಕ್ ನಗರಕ್ಕೆ ಆಗಮಿಸಿದವರೇ ತಾವು ತಂಗಿದ್ದ ಪ್ಯಾಲೇಸ್ ಹೊಟೇಲ್ ಎದುರು ಸುಮಾರು ಎರಡು ಗಂಟೆಗಳಿಂದ ತಮ­ಗಾಗಿ ಕಾಯುತ್ತಿದ್ದ ನೂರಾರು ಅಭಿಮಾನಿಗಳತ್ತ ಕೈಬೀಸಿ ನಡೆದರು.

ಅಭಿಮಾನಿ ಬಳಗದಲ್ಲಿ ಇದ್ದದ್ದು ಬಹುಪಾಲು ಭಾರತೀಯರೇ.
ಕೆಲವು ಸ್ಥಳೀಯರು, ವಿದ್ಯಾರ್ಥಿ­ಗಳು

ಕುತೂಹಲ­ದಿಂದ ಸೇರಿದ್ದರು. ‘ಹರಹರ ಮೋದಿ’ ಉದ್ಗಾರದೊಂದಿಗೆ ‘ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’ ಘೋಷಣೆಗಳು ಸೇ­ಕೊಂಡವು. ಅಮೆರಿಕದ ಪೊಲೀಸರು, ಪ್ರಧಾನಿ ಭದ್ರತಾ ಸಿಬ್ಬಂದಿ ಕೆಲಹೊತ್ತು ಶ್ರಮಿಸ­ಬೇಕಾ­ಯಿತು. ನ್ಯೂಯಾರ್ಕ್ ನಗರದ ರಸ್ತೆಯಲ್ಲಿ ಶಂಖ, ಜಾಗಟೆಗಳು ಮೊಳಗಿದ್ದು ಅಚ್ಚರಿಯೇ. ‘ಅಮೆರಿಕ ಲವ್ಸ್ ಮೋದಿ’ ಫಲಕಗಳು, ಮೋದಿ ಮುಖ­ವಾಡಗಳೂ ಮೋದಿಯವರನ್ನು ಸ್ವಾಗತಿಸುತ್ತಿದ್ದವು. ಹೀಗೆ ಪ್ರಾರಂಭವಾಯಿತು ಪ್ರಧಾನಿ ನರೇಂದ್ರ ಮೋದಿಯವರ ಬಹುನಿರೀಕ್ಷಿತ ಅಮೆರಿಕ ಭೇಟಿ.

ಬಹುಶಃ ಇತರ ದೇಶದ ನಾಯಕರಿಗೆ ಅಮೆರಿಕ­ದಲ್ಲಿ ಈ ಪರಿಯ ಸ್ವಾಗತ, ಅಭಿಮಾನಿ ಪಡೆಯ ಜಯಕಾರ ದೊರೆ ತಿದ್ದು ವಿರಳವೇ. ಈ ಹಿಂದೆ ಭಾರತದ ರಾಷ್ಟ್ರಪತಿ, ಪ್ರಧಾನಿ ಅಮೆರಿಕಕ್ಕೆ ಭೇಟಿ ಕೊಟ್ಟಾಗ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. ಅನಿವಾಸಿ ಭಾರತೀಯ ಉದ್ಯಮಿಗಳ, ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ಭೋಜನ ಕೂಟ, ಸಭೆಗಳು ಆಯೋಜನೆ­ಯಾ­ಗುತ್ತಿದ್ದದ್ದು ಬಿಟ್ಟರೆ ಅಮೆರಿಕದಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಸಾವಿರಾರು ಸಾಮಾನ್ಯ ಭಾರತೀಯರು, ಭಾರತ ಮೂಲದ ಅಮೆರಿಕನ್ನರು ಸಂತಸ ಪಟ್ಟು, ಉತ್ಸಾಹದಿಂದ ಭಾರತದ ನಾಯ­ಕನನ್ನು ಎದುರು ನೋಡಿದ್ದ ಉದಾಹರಣೆಗಳಿಲ್ಲ.

ಇಲ್ಲಿ ಮುಖ್ಯವಾಗಿ ಏಳುವ ಪ್ರಶ್ನೆ ಎಂದರೆ, ಮೋದಿ ಅಮೆರಿಕ ಭೇಟಿ ಅನಿವಾಸಿಗಳಲ್ಲಿ ಹುರುಪು ತಂದಿದ್ದೇಕೆ? ಅದಕ್ಕೆ ನಾಲ್ಕಾರು ಕಾರಣಗಳು ಕಾಣುತ್ತವೆ. ಮೊದಲನೆಯದು ಮೋದಿ ವ್ಯಕ್ತಿತ್ವ ಮತ್ತು ಅವರು ಮೂಡಿಸಿದ ಭರವಸೆ. ಭಾರತದ ಮತದಾರರ ಮೇಲೆ ಚುನಾವಣಾ ಸಂದರ್ಭದಲ್ಲಿ ಆದ ಪ್ರಭಾವ ಅನಿವಾಸಿಗಳ ಮೇಲೂ ಆಗಿದೆ. ಮೋದಿ ಎಂದರೆ ಅಭಿವೃದ್ಧಿ, ಪಾರ­ದರ್ಶಕ ಆಡಳಿತ ಎಂಬುದರ ಜೊತೆ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯ­ಬಲ್ಲ ಆಶಾಭಾವದ ಸಂಕೇತವಾಗಿ ಮೋದಿ ಕಂಡಿದ್ದು ಅಮೆರಿಕದಲ್ಲೂ ಅಭಿಮಾನಿ­ಗಳನ್ನು ಬೆಳೆಸಿದೆ. ಹೀಗಾ­ಗಿಯೇ ಕಳೆದ ಲೋಕಸಭಾ ಚುನಾವಣೆ­ಯಲ್ಲಿ ಮೋದಿಪರ ಪ್ರಚಾರ ಮಾಡಲು, ಮತ ಚಲಾಯಿಸಲು ಅನೇ­ಕರು ಅಮೆರಿಕದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು.

ಎರಡನೆಯದಾಗಿ, ಮೋದಿ ಅಮೆರಿಕ­ದಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಹಲವಾರು ವರ್ಷಗಳಿಂದ ಸಂಪರ್ಕ ಇಟ್ಟುಕೊಂಡವರು. ಅಮೆರಿಕಕ್ಕೆ ಇದು ಮೋದಿಯವರ ಮೊದಲ ಭೇಟಿ­ಯೇನು ಅಲ್ಲ. ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರ­ಗಳಲ್ಲಿ ಸಂಘ ಪರಿವಾರ ಸಕ್ರಿಯ­ವಾಗಿದೆ. ಅಮೆರಿ­ಕದಲ್ಲಿ ಹಿಂದೂ ಸ್ವಯಂಸೇವಕ ಸಂಘ ಅಧಿಕೃತ­ವಾಗಿ ಆರಂಭಗೊಂಡ 25ನೇ ಸಂಭ್ರಮಾ­ಚರಣೆ ಈ ವರ್ಷ ನಡೆಯುತ್ತಿದೆ. ಹೀಗಾಗಿ ಸಂಘ ಪರಿ­ವಾರ ಅಮೆರಿಕದ ಉದ್ದಗಲಕ್ಕೂ ಅನೇಕ ನಗರ­ಗಳಲ್ಲಿ ಹರಡಿ, ರೆಂಬೆ ಕೊಂಬೆ ಚಾಚಿ ಸಂಘಟನೆಯ ಕಾರ್ಯದಲ್ಲಿ ತೊಡಗಿದೆ. ನರೇಂದ್ರ ಮೋದಿ, ಮುರಳಿ ಮನೋಹರ್ ಜೋಷಿ ಸೇರಿದಂತೆ  ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರು ಅಮೆರಿಕಕ್ಕೆ ಬರುತ್ತಿದ್ದ ಬಗ್ಗೆ, ಅಲ್ಲಲ್ಲಿ ವಿವೇಕಾನಂದರ ಕುರಿತು ಭಾಷಣ ಮಾಡುತ್ತಿದ್ದ ಬಗ್ಗೆ ಹಲವರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಮ್ಯಾಡಿಸನ್ ಸ್ಕ್ವೇರ್ ಕಾರ್ಯಕ್ರಮದ ಆಯೋಜಕ­ರಲ್ಲಿ ಪ್ರಮುಖರಾದ ಡಾ. ಭರತ್ ಬಾರೈ ಮೋದಿಯವರಿಗೆ ಆಪ್ತರಾ­ಗಿದ್ದೂ ಆ ಕಾಲದಲ್ಲೇ. ಜೊತೆಗೆ ಬಿಜೆಪಿಯ ‘ಓವರ್ಸಿಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಘಟಕ ಕೂಡ ಅಮೆರಿಕದಲ್ಲಿ ಸಕ್ರಿಯ­ವಾಗಿದೆ. ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ವಿದೇಶಗಳಿಂದ ದೇಣಿಗೆ ಹರಿದುಬಂದದ್ದು ಕೂಡ ಈ ಘಟಕಗಳ ಮೂಲಕವೇ. ಹೀಗಾಗಿ ಅಮೆರಿಕದಲ್ಲೂ ಬಿಜೆಪಿ ತನ್ನದೇ ಕಾರ್ಯಕರ್ತರ ಪಡೆಯನ್ನೂ ಹೊಂದಿದೆ. ಅದಲ್ಲದೇ ಗುಜರಾತ್ ಮುಖ್ಯ­ಮಂತ್ರಿ­ಯಾ­ದಾಗ ಮೋದಿ, ಗುಜರಾತ್ ಅಭಿವೃದ್ಧಿಗೆ ಬಂಡ­ವಾಳ ತರಲು ನೋಡಿದ್ದು ಇತರ ದೇಶಗಳಲ್ಲಿ ನೆಲೆಸಿ­ರುವ ಶ್ರೀಮಂತ ಗುಜರಾತಿ ಮತ್ತು ಇತರ ಭಾರತೀಯ­ರೆಡೆಗೆ ಎನ್ನುವುದನ್ನು ಮರೆಯುವಂತಿಲ್ಲ.

ಈ ಹಿಂದೆ 2005­ರಲ್ಲಿ ಅಮೆ­ರಿಕ ಮೋದಿಯವರಿಗೆ ವೀಸಾ ನಿರಾಕರಿಸಿದರೂ ಅವರು   ಅಂತರ್ಜಾಲ ಮತ್ತು ಆಧುನಿಕ ತಂತ್ರ­ಜ್ಞಾನ ಬಳಸಿಕೊಂಡು ವಿಡಿಯೊ ಕಾನ್ಫರೆನ್ಸ್ ಮೂಲ­ಕವೇ ಅಮೆರಿಕದ ಭಾರತೀಯ­ರೊಂದಿಗೆ, ಉದ್ಯಮಿಗ­ಳೊಂದಿಗೆ ಸಂಪ­ರ್ಕ­­ದಲ್ಲಿದ್ದರು. ಗುಜರಾತ್ ಅಭಿವೃದ್ಧಿಗೆ ಅನಿವಾಸಿಗಳನ್ನು ಜೋಡಿಸಿಕೊಂಡಿದ್ದರು.

ಆತ್ಮಾಭಿಮಾನ ಕೆಣಕಿದ್ದ ಅಮೆರಿಕದ ನಿರ್ಧಾರ: ಈ ಎಲ್ಲಾ ಸಂಗತಿಗಳ ಜೊತೆ ಅಮೆರಿಕ, ತನ್ನ ನೆಲದ ಓರ್ವ ನಾಯ­ಕನಿಗೆ ವೀಸಾ ನಿರಾಕರಿಸಿ ಅಪ­ಮಾನ ಮಾಡಿತ್ತು ಎಂಬುದು ಕೂಡ ಇಲ್ಲಿನ ಭಾರತೀಯರ ಆತ್ಮಾಭಿಮಾನ­ವನ್ನು ಕೆಣ­ಕಿತ್ತು. ಹೀಗಾಗಿಯೇ ಮೋದಿ ಪ್ರಧಾನಿ­ಯಾದ ದಿನ­ದಿಂದಲೂ ಅವರನ್ನು ಸಂಭ್ರಮದಿಂದ ಅಮೆರಿಕಕ್ಕೆ ಬರಮಾಡಿ­ಕೊಳ್ಳಬೇಕೆಂಬ ಚರ್ಚೆಗಳು ವಿವಿಧ ಅನಿವಾಸಿ ಭಾರತೀಯ ವೇದಿಕೆ­ಗಳಲ್ಲಿ ನಡೆಯು­ತ್ತಿದ್ದವು.

ಇಷ್ಟೆಲ್ಲಾ ಸಂಗತಿಗಳ ಜೊತೆ ಮೋದಿ ಗುಜರಾತಿನವರು, ಹಿಂದಿ ಪ್ರಾಂತ್ಯದ ರಾಜಕಾರಣಿ, ಸಾಮಾಜಿಕ ಜಾಲತಾಣ­ಗಳನ್ನು ಸಮರ್ಥವಾಗಿ ಬಳಸಿ ಜನರ ಸನಿಹಕ್ಕೆ ಬಂದ, ಕೆಳಹಂತದಿಂದ ಉನ್ನತ ಹುದ್ದೆಗೇರಿದ, ಉದ್ಯಮ­ಶೀಲತೆಗೆ ನೀರೆರೆಯುವ ರಾಜಕಾರಣಿ ಎಂಬ ಸಂಗತಿಗಳೂ ಸೇರಿ ಭಾರತೀಯ ಅಮೆರಿಕನ್ನರ ಉತ್ಸಾಹವನ್ನು ವೃದ್ಧಿ­ಸಿತ್ತು. ಈ ಉತ್ಸಾಹ, ಅಭಿಮಾನಗಳೇ ಮೋದಿ ಸ್ವಾಗತದಲ್ಲಿ ಜಾಹೀರಾದವು.                  

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT