ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಘನ್: ವಿಶ್ವಸಂಸ್ಥೆ ವಸತಿ ಗೃಹದ ಬಳಿ ಆತ್ಮಹತ್ಯಾ ದಾಳಿ ನಾಲ್ವರ ಸಾವು

Last Updated 31 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಂದಹಾರ್ (ಎಪಿ): ವಿಶ್ವಸಂಸ್ಥೆ ವಸತಿ ಗೃಹ ಹಾಗೂ ಅಂತರರಾಷ್ಟ್ರೀಯ ನೆರವು ಸಮೂಹದ ಕಚೇರಿಗಳ ಸಮೀಪವಿರುವ ತಪಾಸಣಾ ಸ್ಥಳವೊಂದರ ಮೇಲೆ ಸೋಮವಾರ ಮುಂಜಾನೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಒಬ್ಬ ಪೊಲೀಸ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಕಂದಹಾರ್‌ನ ದಕ್ಷಿಣ ಭಾಗದಲ್ಲಿರುವ  ತಪಾಸಣಾ ಸ್ಥಳ (ಚೆಕ್‌ಪಾಯಿಂಟ್) ಕಟ್ಟಡವಿದ್ದ ಪ್ರದೇಶಕ್ಕೆ ಸ್ಫೋಟಕ ಸಾಮಗ್ರಿಗಳಿದ್ದ ವಾಹನವನ್ನು ಬೆಳಿಗ್ಗೆ 6.15ರ ಸಮಯದಲ್ಲಿ ನುಗ್ಗಿಸಿದ ಉಗ್ರರು ಈ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ  ಆಕ್ರಮಣಕಾರರು ಮತ್ತು ಭದ್ರತಾ ಪಡೆಯವರ ನಡುವೆ ಗುಂಡಿನ ಚಕಮಕಿ ನಡೆದಿದೆ. ಆದರೆ, ಉಗ್ರರು ಇಡೀ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಎಂದು ಕಂದಹಾರ್ ಪೊಲೀಸ್ ಮುಖ್ಯಸ್ಥ ಜನರಲ್ ಅಬ್ದುಲ್ ರಜಾಕ್ ಹೇಳಿದ್ದಾರೆ.

`ಬಾಂಬ್ ಸ್ಫೋಟವಾಗುತ್ತಿದ್ದಂತೆ ಆ ಪ್ರದೇಶವನ್ನು ಸುತ್ತುವರಿದ ಉಗ್ರರು ಅಂತರರಾಷ್ಟ್ರೀಯ ಪರಿಹಾರ ಮತ್ತು ಅಭಿವೃದ್ಧಿ ಸಂಸ್ಥೆಯ (ಐಆರ್‌ಡಿ) ಸಮೀಪದಲ್ಲಿರುವ ಪ್ರಾಣಿ ಚಿಕಿತ್ಸಾಲಯವೊಂದನ್ನು ವಶಕ್ಕೆ ತೆಗೆದುಕೊಂಡರು~ ಎಂದು ಕಂದಹಾರ್ ಸ್ಥಳೀಯ ಸರ್ಕಾರದ ಮಾಧ್ಯಮ ಮುಖ್ಯಸ್ಥ ಫೈಸಲ್ ಖಾನ್ ತಿಳಿಸಿದ್ದಾರೆ.

`ಪ್ರಾಣಿ ಚಿಕಿತ್ಸಾಲಯವು ಐಆರ್‌ಡಿ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ನಿಯಂತ್ರಣದಲ್ಲಿರುವ ವಸತಿ ಗೃಹದ ಸಮೀಪದಲ್ಲೇ ಇದೆ~ ಎಂದು ಹೇಳಿದ್ದಾರೆ.

ಆತ್ಮಹತ್ಯಾ ಬಾಂಬ್ ದಾಳಿ ನಡೆದ ಪ್ರದೇಶದ ಸನಿಹವೇ ಆಫ್ಘನ್‌ಗೆ ನೆರವು ನೀಡುತ್ತಿರುವ ಅನೇಕ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಗಳ ಕಚೇರಿಗಳಿವೆ.

ತಾಲಿಬಾನ್ ಉಗ್ರರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ. `ನಮ್ಮ ಗುರಿ ವಿಶ್ವಸಂಸ್ಥೆ ಮತ್ತು ಐಆರ್‌ಡಿಗೆ ಸೇರಿದ ವಸತಿ ಗೃಹವಾಗಿತ್ತು~ ಎಂದು ತಾಲಿಬಾನ್ ಸಂಘಟನೆಯ ವಕ್ತಾರ ಖಾರಿ ಯೂಸೆಫ್ ಹೇಳಿದ್ದಾರೆ.

ಈ ದಾಳಿಯಿಂದ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಈ ಮುನ್ನ ಹೇಳಲಾಗಿತ್ತು. ಆದರೆ ಕಂದಹಾರ್ ರಾಜ್ಯಪಾಲರ ಕಚೇರಿ ವಕ್ತಾರ ಫೈಸಲ್ ಖಾನ್, ಮೂವರು ನಾಗರಿಕರು ಮತ್ತು ಒಬ್ಬ ಪೊಲೀಸ್ ಮೃತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೂವರು ನಾಗರಿಕರು ಸೇರಿದಂತೆ ನೇಪಾಳ ಮೂಲದ ಭದ್ರತಾ ಸಿಬ್ಬಂದಿ ಒಬ್ಬರು ಗಾಯಗೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ದಾಳಿ: ಸಚಿವ ಪಾರು (ಇಸ್ಲಾಮಾಬಾದ್ ವರದಿ): ಪಾಕ್‌ನ ವಾಯುವ್ಯ ಪ್ರಾಂತ್ಯದಲ್ಲಿ ಸೋಮವಾರ ತಾಲಿಬಾನ್‌ಉಗ್ರರು ಖೈಬರ್- ಪಖ್ತುಂಕ್ವಾ ಪ್ರಾಂತ್ಯದ ವಸತಿ ಸಚಿವ ಅವಾಮಿ ನ್ಯಾಷನಲ್ ಪಕ್ಷದ ಅಮ್ಜದ್ ಖಾನ್ ಅಫ್ರಿದಿ ಕಾರಿನ ಮೇಲೆ  ಗುಂಡಿನ ದಾಳಿ ನಡೆಸಿದ್ದು, ಸಚಿವರು ಅಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT