ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ: ಲಿಬರಲ್‌ ಪಕ್ಷಕ್ಕೆ ಮತ್ತೆ ಅಧಿಕಾರ ಸಾಧ್ಯತೆ

ಮತ್ತೆ ಪ್ರಧಾನಿ ಪಟ್ಟದತ್ತ ಸ್ಕಾಟ್‌ ಮಾರಿಸನ್‌ l ಸೋಲಿಗೆ ತಲೆಬಾಗುವೆ: ಬಿಲ್‌ ಶಾರ್ಟನ್‌
Last Updated 18 ಮೇ 2019, 20:15 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಮತಗಟ್ಟೆ ಸಮೀಕ್ಷೆಗಳನ್ನು ಬುಡಮೇಲು ಮಾಡುವಂತಹ ಫಲಿತಾಂಶಕ್ಕೆ ಆಸ್ಟ್ರೇಲಿಯಾ ಸಾಕ್ಷಿಯಾಗಿದೆ. ಸಂಸತ್‌ಗೆ ಶನಿವಾರ ಚುನಾವಣೆ ಮುಕ್ತಾಯಗೊಂಡಿದ್ದು, ಅಧಿಕಾರರೂಢ ಲಿಬರಲ್‌ ಪಕ್ಷವೇ ಮತ್ತೆ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಸ್ಕಾಟ್‌ ಮಾರಿಸನ್‌ ಮತ್ತೆ ಪ್ರಧಾನಿ ಪಟ್ಟದತ್ತ ದಾಪುಗಾಲು ಇಟ್ಟಿದ್ದಾರೆ.

ಈವರೆಗೆ ಶೇ 70ರಷ್ಟು ಮತಗಳನ್ನು ಎಣಿಕೆ ನಡೆದಿದ್ದು, ಲಿಬರಲ್‌ ಪಾರ್ಟಿ ನೇತೃತ್ವದ ಮೈತ್ರಿಕೂಟ 82 ಸ್ಥಾನಗಳಲ್ಲಿ ಗೆಲುವು ಅಥವಾ ಮುನ್ನಡೆ ಸಾಧಿಸಿದೆ. ವಿರೋಧ ಪಕ್ಷ ಲೇಬರ್‌ ಪಾರ್ಟಿ ಕೇವಲ 66 ಸ್ಥಾನಗಳಲ್ಲಿ ಮುನ್ನಡೆ ಅಥವಾ ಗೆಲುವು ಸಾಧಿಸಿದೆ.

ಆದರೂ, ಲಿಬರಲ್‌ ಪಕ್ಷ ಭಾರಿ ಬಹುಮತದಿಂದ ಗೆಲುವು ಸಾಧಿಸಲಿದೆಯೋ ಅಥವಾ ಸರಳ ಬಹುಮತವನ್ನಷ್ಟೇ ಪಡೆಯಲಿದೆಯೋ ಎಂಬ ಬಗ್ಗೆ ಇನ್ನೂ ಅಂತಿಮ ಚಿತ್ರಣ ಸಿಕ್ಕಿಲ್ಲ.ಕಳೆದ ಎರಡು ವರ್ಷಗಳಿಂದಲೂ ಲೇಬರ್‌ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ಸ್ಕಾಟ್‌ ಮಾರಿಸನ್‌ ಸರ್ಕಾರದ ಸಂಪುಟದ ಸದಸ್ಯರು ಪ್ರಚಾರ ನಡೆಸುವ ವೇಳೆ ಭಾರಿ ವಿರೋಧ ಮತ್ತು ಟೀಕೆಗಳು ವ್ಯಕ್ತವಾಗಿದ್ದವು.

ಹವಾಮಾನ ಬದಲಾವಣೆ ಚರ್ಚೆ: ಸುದೀರ್ಘ ಐದು ವಾರ ದೇಶದಾದ್ಯಂತ ನಡೆದ ಚುನಾವಣಾ ಪ್ರಚಾರದ ಪರಿಣಾಮ 1.6 ಕೋಟಿ ಜನ ಮತ ಚಲಾಯಿಸಿದ್ದಾರೆ.ಪ್ರಧಾನಿ ಸ್ಕಾಟ್‌ ಮಾರಿಸನ್‌ ಸಿಡ್ನಿಯಲ್ಲಿ ಹಕ್ಕು ಚಲಾಯಿಸಿದರೆ, ಲೇಬರ್ ಪಕ್ಷದ ನಾಯಕ ಬಿಲ್‌ ಶಾರ್ಟನ್‌ ಮೆಲ್ಬರ್ನ್‌ನಲ್ಲಿ ಮತ ಹಾಕಿದರು.ಹವಾಮಾನ ಬದಲಾವಣೆ ವಿಷಯವೇ ಈ ಚುನಾವಣೆಯಲ್ಲಿ ಮುಖ್ಯ ವಿಷಯವಾಗಿತ್ತು.

‘ಹವಾಮಾನ ಬದಲಾವಣೆ ಸಮಸ್ಯೆ ತೀವ್ರತರವಾಗುತ್ತಿದೆ. ಯಾವುದೂ ಆಸ್ಟ್ರೇಲಿಯಾಕ್ಕೆ ಪೂರಕವಾಗಿ ಸಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದಿನ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ಶಾರ್ಟನ್‌ ಪ್ರತಿಪಾದಿಸುತ್ತಿದ್ದರು.

‘ಹವಾಮಾನ ವೈಪರೀತ್ಯ ಕುರಿತು ನಿರ್ಲಕ್ಷ್ಯ ವಹಿಸಿದ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಎರಡು ಪಕ್ಷಗಳ ನಡುವೆ ಈ ವಿಷಯವೇ ನಿಜವಾದ ವ್ಯತ್ಯಾಸವಾಗಿದೆ’ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರದೇಶಗಳು ಕಾಳ್ಗಿಚ್ಚಿಗೆ ನಾಶವಾಗುತ್ತಿರುವುದು, ’ಗ್ರೇಟ್‌ ಬ್ಯಾರಿಯರ್‌ ರೀಫ್‌’ನಂತಹ ನೈಸರ್ಗಿಕ ತಾಣಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಹವಾಮಾನ ವೈಪರೀತ್ಯದ ಪರಿಣಾಮ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹವಾಮಾನ ಬದಲಾವಣೆ ಪರಿಣಾಮ ನಿಯಂತ್ರಣವೇ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಶೇಕಡ 64ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರು. ಹೊರಸೂಸುವಿಕೆ ಪ್ರಮಾಣವನ್ನು ಶೇಕಡ 45ಕ್ಕೆ ಕಡಿತಗೊಳಿಸುವುದಾಗಿ ಲೇಬರ್‌ ಪಕ್ಷ ಭರವಸೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT