‘ನನ್ನ ಮಗಳು ತಲಸ್ಸೇಮಿಯಾದಿಂದ ಬಳಲುತ್ತಿದ್ದಾಳೆ. ತಕ್ಷಣವೇ ನಾನು ತವರಿಗೆ ಮರಳಬೇಕಾಗಿದೆ’ ಎಂದು ಅರ್ಜಿಯಲ್ಲಿ ತಿಳಿಸಿದ್ದ ಉಜ್ಮಾ, ಇದಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಸಲ್ಲಿಸಿದ್ದರು.
ಪತ್ನಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅಲಿ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
‘ಉಜ್ಮಾ ಯಾವಾಗ ಬೇಕಾದರೂ ತವರಿಗೆ ಮರಳಲು ಸ್ವತಂತ್ರರು. ವಾಘಾ ಗಡಿಯವರೆಗೆ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗುವುದು’
ಎಂದು ನ್ಯಾಯಮೂರ್ತಿ ಮೊಹಸೀನ್ ಅಖ್ತರ್ ಕಿಯಾನಿ ಹೇಳಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
‘ನೀವು ನಿಮ್ಮ ಪತಿಯನ್ನು ಭೇಟಿ ಮಾಡಲು ಇಚ್ಛಿಸುವಿರಾ’ ಎಂದು ನ್ಯಾಯಮೂರ್ತಿಗಳು ಉಜ್ಮಾ ಅವರನ್ನು ಕೇಳಿದರು. ಅದನ್ನು ಉಜ್ಮಾ ನಿರಾಕರಿಸಿದ್ದಾರೆ.
ಮಲೇಷ್ಯಾದಲ್ಲಿ ಭೇಟಿಯಾಗಿದ್ದ ಉಜ್ಮಾ ಮತ್ತು ಅಲಿ ನಡುವೆ ಪ್ರೇಮಾಂಕುರವಾಗಿತ್ತು, ಬಳಿಕ ವಾಘಾ ಗಡಿಯ ಮೂಲಕ ಮೇ 1ರಂದು ಪಾಕಿಸ್ತಾನಕ್ಕೆ ಬಂದಿದ್ದ ಅವರು, ಮೇ 3ರಂದು ವಿವಾಹವಾಗಿದ್ದರು ಎಂದು ವರದಿಗಳು ತಿಳಿಸಿದ್ದವು.