ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ಮಾತುಕತೆ: ಕೊನೆಗಾಣುವುದೇ ರಕ್ತಪಾತ?

Last Updated 12 ಜುಲೈ 2015, 19:35 IST
ಅಕ್ಷರ ಗಾತ್ರ

ಆಫ್ಘಾನಿಸ್ತಾನ ಅನೇಕ ದುರಂತಗಳ ಸರಮಾಲೆ ಕಂಡ ರಾಷ್ಟ್ರ. ಅತಿ ಹೆಚ್ಚು ಆಕ್ರಮಣಗಳಿಗೆ ಒಳಪಟ್ಟ, ಹಲವಾರು ಬಾರಿ ನಡೆದ ಯುದ್ಧಗಳಿಂದ ಧ್ವಂಸಗೊಂಡ ರಾಷ್ಟ್ರ ಕೂಡ ಇದು.

ಸರ್ಕಾರದ ಭ್ರಷ್ಟಾಚಾರ, ಅಂತರ್ಯುದ್ಧಗಳು, ತಾಲಿಬಾನ್‌ ಬಂಡುಕೋರರ ವಿಧ್ವಂಸಕ ಕೃತ್ಯಗಳಿಂದ ವಿಶ್ವದಲ್ಲೇ ಇದು ಇನ್ನೂ ಅತಿ ಬಡ ರಾಷ್ಟ್ರವಾಗಿಯೇ ಉಳಿದುಕೊಂಡಿದೆ. ತಾಲಿಬಾನ್‌ ಉಗ್ರರ ಹಿಡಿತಕ್ಕೆ ಸಿಲುಕಿ ನಲುಗಿರುವ ಈ ರಾಷ್ಟ್ರದಲ್ಲಿ ರಕ್ತಪಾತ ಈಗಲೂ ನಿಂತಿಲ್ಲ. ಆಫ್ಘಾನಿಸ್ತಾನದಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಅಶ್ರಫ್‌ ಘನಿ ಅವರು ತಾಲಿಬಾನ್‌ಗಳ ಜತೆ ಮಾತುಕತೆ ನಡೆಸಿ ಸಂಧಾನಕ್ಕೆ ಬರಲು ಪಾಕಿಸ್ತಾನದ ನೆರವಿಗಾಗಿ  ಸತತ ಪ್ರಯತ್ನ ನಡೆಸಿದ್ದರು
.
ಅದು ಈಗ ಫಲ ಕಂಡಂತೆ ತೋರುತ್ತದೆ. ಕಳೆದ ಮಂಗಳವಾರಷ್ಟೆ ತಾಲಿಬಾನ್‌ ಪ್ರತಿನಿಧಿಗಳು ಮತ್ತು ಆಫ್ಘಾನಿಸ್ತಾನ ಸರ್ಕಾರದ ನಿಯೋಗದ ನಡುವೆ ಮೊದಲ ಅಧಿಕೃತ ಮಾತುಕತೆ ನಡೆದಿದೆ.ನೆರೆಯ ಆಫ್ಘಾನಿಸ್ತಾನದಲ್ಲಿ 13ಕ್ಕೂ ಹೆಚ್ಚು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಕ್ರಮವಾಗಿ ಪಾಕಿಸ್ತಾನ ಈ ಸಭೆಯನ್ನು ಇಸ್ಲಾಮಾಬಾದ್‌ ಸಮೀಪದ ಮುರ್ರಿಯಲ್ಲಿ ಏರ್ಪಡಿಸಿತ್ತು.

ಮಂಗಳವಾರ 7ರಂದು ರಾತ್ರಿ ಇಡೀ ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆ ನಡೆದಿದೆ. ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು

ಸ್ಥಿರತೆ ಮೂಡಿಸುವ ಯತ್ನದ ಈ ಮಾತುಕತೆಯನ್ನು  ರಂಜಾನ್‌ ಬಳಿಕ ಮುಂದುವರಿಸಲು ಉಭಯ ಬಣಗಳು ನಿರ್ಧರಿಸಿವೆ.ಆಫ್ಘಾನಿಸ್ತಾನದ ಉನ್ನತ ಮಟ್ಟದ ಶಾಂತಿ ಪರಿಷತ್‌ ನಿಯೋಗದಲ್ಲಿ (ಎಎಚ್‌ಪಿಸಿ) ಉಪ ವಿದೇಶಾಂಗ ಸಚಿವ ಹೆಕ್ಮತ್‌ ಖಲೀಲ್‌ ಕರ್ಜೈ ಕೂಡ ಇದ್ದರು. ಸರ್ಕಾರ ಹಿರಿಯ ಸಚಿವರೊಬ್ಬರು ಬಹಿರಂಗವಾಗಿ ಉಗ್ರರನ್ನು ಭೇಟಿಯಾಗಿದ್ದು ಇದೇ ಮೊದಲು.

ಆಫ್ಘಾನಿಸ್ತಾನದಲ್ಲಿ 1996–2001ರವೆಗೆ ಇದ್ದ ತಾಲಿಬಾನ್‌ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಮುಲ್ಲಾ ಅಬ್ಬಾಸ್‌ ಅಕುಂದ್‌ ಸೇರಿ ಮೂವರು ತಾಲಿಬಾನ್‌ ಪ್ರತಿನಿಧಿಗಳಾಗಿದ್ದರು.ಮಾತುಕತೆಯಲ್ಲಿ ಚೀನಾ ಮತ್ತು ಅಮೆರಿಕದ ಪ್ರತಿನಿಧಿಗಳೂ ಪಾಲ್ಗೊಂಡಿರುವುದು ವಿಶೇಷವಾಗಿದೆ.  ಆಫ್ಘಾನಿಸ್ತಾನದ ಶಾಂತಿ ಪ್ರಕ್ರಿಯೆಯಲ್ಲಿ ಚೀನಾದ ಪಾತ್ರ ಹೆಚ್ಚುತ್ತಿರುವುದನ್ನು ಇದು ಸೂಚಿಸುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ.ಆಫ್ಘಾನಿಸ್ತಾನದಲ್ಲಿ ಮಂಗಳವಾರ ಮಾತುಕತೆಗೆ ಮೊದಲು ಕೂಡ ಕಾಬೂಲ್‌ನಲ್ಲಿ ಎರಡು ಕಡೆ ಆತ್ಮಾಹುತಿ ಬಾಂಬ್‌ ದಾಳಿಗಳು ನಡೆದ ಬಗ್ಗೆ ವರದಿಯಾಗಿರುವುದು ಕಾಕತಾಳೀಯ.

ಆಫ್ಘಾನಿಸ್ತಾನದಿಂದ ವಿದೇಶಿ ಸೇನಾ ಪಡೆಗಳ ವಾಪಸಾತಿ, ಸೆರೆವಾಸಿಗಳ ಸಮಸ್ಯೆ ಮತ್ತು ವಿಶ್ವಸಂಸ್ಥೆ ನಿರ್ಬಂಧದ ಕುರಿತು ತಾಲಿಬಾನ್‌ ಮುಖಂಡರು ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಆ ನಂತರ ಕಾಬೂಲ್‌ನಲ್ಲಿ ಉಪ ವಿದೇಶಾಂಗ ಸಚಿವ ಹೆಕ್ಮತ್‌ ಕರ್ಜೈ ಹೇಳಿದ್ದಾರೆ.

ತಾಲಿಬಾನ್‌ನಲ್ಲಿ ಒಡಕು?: ಶಾಂತಿ ಮಾತುಕತೆ ಕುರಿತು ತಾಲಿಬಾನ್‌ನ ಇಬ್ಬರು ಉನ್ನತ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದೂ ಹೇಳಲಾಗುತ್ತಿದೆ.  ಆದರೆ, ಸಚಿವ ಕರ್ಜೈ ಪ್ರಕಾರ, ಈ ಮಾತುಕತೆಗೆ ಉನ್ನತ ನಾಯಕತ್ವದ ಬೆಂಬಲ, ಅನುಮತಿ ದೊರಕಿತ್ತು.  ಸಂಸ್ಥಾಪಕ, ಉನ್ನತ ನಾಯಕ ಮೊಹಮ್ಮದ್‌ ಒಮರ್‌ ಪರವಾಗಿ ಹೇಳಿಕೆಗಳನ್ನು ನೀಡುವ ಸಂಘಟನೆಯ ಎರಡನೇ  ನಾಯಕ ಹಾಗೂ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನೆಲೆ ಕಂಡುಕೊಂಡಿರುವ ಅಖ್ತರ್‌ ಮೊಹಮ್ಮದ್‌ ಮನ್ಸೂರ್‌ನ ಒಪ್ಪಿಗೆ ಇತ್ತು.

ತಾಲಿಬಾನ್‌ ಸರ್ಕಾರ ಉರುಳಿದ ಬಳಿಕ 2001ರಿಂದ ಒಮರ್‌ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕೆಲಉಗ್ರರು ಈಗಾಗಲೇ ತಮ್ಮ ನಿಷ್ಠೆ ಬದಲಿಸಿಕೊಂಡು ಮಧ್ಯಪ್ರಾಚ್ಯ ಮೂಲದ ಸಂಘಟನೆ ಐ.ಎಸ್‌ ಸೇರಿಕೊಂಡಿದ್ದಾರೆ. ಮಾತುಕತೆಗೆ ತಾಲಿಬಾನ್‌ನ ಮತ್ತೊಬ್ಬ ನಾಯಕ ಜಕೀರ್‌ನ ವಿರೋಧ ಇತ್ತು ಎನ್ನಲಾಗಿದೆ. ಮಾತುಕತೆ ನಿಲ್ಲಿಸದಿದ್ದರೆ ಬೆಂಬಲಿಗರೊಂದಿಗೆ ಮತ್ತೊಂದು ತಂಡ ಕಟ್ಟುವುದಾಗಿ ಅಥವಾ ಐ.ಎಸ್‌ ಸೇರುವುದಾಗಿ ಈತ ಬೆದರಿಕೆ ಹಾಕಿದ್ದಾನೆ ಎಂದೂ ಹೇಳಲಾಗುತ್ತಿದೆ.

ಇದೇನೆ ಇರಲಿ, ‘ಮಾತುಕತೆಯನ್ನು ನಿರಂತರ ಪ್ರಕ್ರಿಯೆಯಾಗಿ ನಡೆಸಲು ನಾವು ಒಪ್ಪಿದ್ದೇವೆ’ ಎಂದು ಕರ್ಜೈ ತಿಳಿಸಿದ್ದಾರೆ. ಮುಂದಿನ ಮಾತುಕತೆಯು ಕತಾರ್‌ ರಾಜಧಾನಿ ದೋಹಾದಲ್ಲಿ ಆ.15–16ರಂದು ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಶಾಂತಿ ಮಾತುಕತೆಯು  ಆಫ್ಘಾನಿಸ್ತಾನದಲ್ಲಿ ಪ್ರತಿ ತಿಂಗಳು ನೂರಾರು ಮಂದಿ ಹತ್ಯೆಗೆ ಕಾರಣವಾಗಿರುವ ಸಂಘರ್ಷವನ್ನು  ತಡೆಯುವುದೇ ಎಂಬುದನ್ನು ಕಾದು ನೋಡಬೇಕು.

ಆಫ್ಘಾನಿಸ್ತಾನ ಹಿನ್ನೆಲೆ: ಆಫ್ಘಾನಿಸ್ತಾನ ಈ ಮೊದಲಿನಿಂದಲೂ ಹಲವಾರು ಯುದ್ಧಗಳು, ಸೇನಾ ಕಾರ್ಯಾಚರಣೆಗಳನ್ನು ಕಂಡಿದೆ. ಮುಖ್ಯವಾಗಿ ಅಲೆಕ್ಸಾಂಡರ್‌ ದಿ ಗ್ರೇಟ್‌, ಮುಸ್ಲಿಂ ಅರಬ್‌ಗಳು,  ಬ್ರಿಟಿಷರು, ಆಗಿನ ಸೋವಿಯತ್‌ ಒಕ್ಕೂಟ ಮತ್ತು ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಆಕ್ರಮಣಗಳನ್ನು ಎದುರಿಸಿದೆ. 1979– 1989ರವರೆಗೆ ಆಘ್ಘಾನಿಸ್ತಾನದಲ್ಲಿ ಸೋವಿಯತ್‌ ಒಕ್ಕೂಟದಿಂದ ಯುದ್ಧ ನಡೆದಿತ್ತು. ಆಗ ಆಫ್ಘನ್‌ ಮುಜಾಹಿದ್ದೀನ್‌ಗಳಿಗೆ ಅಮೆರಿಕ  ಬೆಂಬಲ ನೀಡಿತ್ತು.

1988ರಲ್ಲಿ ನಡೆದ ಶಾಂತಿ ಒಪ್ಪಂದದ ಬಳಿಕ ಸೋವಿಯತ್‌ ಸೇನೆ ಆಫ್ಘನ್‌ನಿಂದ 1989ರಲ್ಲಿ ಸಂಪೂರ್ಣ ವಾಪಸಾಯಿತು. ಆ ಬಳಿಕ 1990ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಉತ್ತರ ಪ್ರಾಂತ್ಯದಲ್ಲಿ  ತಾಲಿಬಾನ್‌ ಚಟುವಟಿಕೆ ಮೊಳಕೆಯೊಡೆಯಿತು.ಆಫ್ಘಾನಿಸ್ತಾನದಲ್ಲಿ ಅಂತರ್‌ಯುದ್ಧ ಮುಂದುವರಿದು ಸೋವಿಯತ್‌ ಬೆಂಬಲಿತ ಅಧ್ಯಕ್ಷ ನಜೀಬುಲ್ಲಾ ಆಡಳಿತವೂ ಕೊನೆಗೊಂಡಿತು. 1996ಲ್ಲಿ ತಾಲಿಬಾನ್‌ ಸಂಘಟನೆ ರಾಷ್ಟ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು 2001ರವರೆಗೆ ಅಟ್ಟಹಾಸ ಮೆರೆಯಿತು. 2001ರ ಸೆ.11ರಂದು ಅಮೆರಿಕದಲ್ಲಿ ವಿಶ್ವ ವಾಣಿಜ್ಯ ಕಟ್ಟಡಕ್ಕೆ ದಾಳಿ ನಡೆದ ಬಳಿಕ ಅಮೆರಿಕ ಅಕ್ಟೋಬರ್‌ನಲ್ಲಿ ಆಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ತಾಲಿಬಾನ್‌ ಸರ್ಕಾರವನ್ನು ಉರುಳಿಸಿತು.

***
ಈ ಶಾಂತಿ ಮಾತುಕತೆ ಬಹಳ ಮಹತ್ವದ್ದು. ಇದಕ್ಕೆ ಅಡ್ಡಿ ಉಂಟು ಮಾಡುವುದನ್ನು ಸಹಿಸುವುದಿಲ್ಲ.
ನವಾಜ್‌ ಷರೀಫ್‌,
ಪಾಕ್‌ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT