ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟದಲ್ಲಿ 63 ವರ್ಷ ನಿವೃತ್ತಿ ಇನ್ನೂ ದೂರ

Last Updated 13 ಸೆಪ್ಟೆಂಬರ್ 2015, 19:34 IST
ಅಕ್ಷರ ಗಾತ್ರ

ಸೆಪ್ಟೆಂಬರ್‌ 9ರ ಬುಧವಾರ ಬ್ರಿಟನ್‌ ರಾಜಪ್ರಭುತ್ವದ ಇತಿಹಾಸ ಹೊಸ ದಾಖಲೆ ಕಂಡಿತು. ಅತಿ ದೀರ್ಘ ಕಾಲದವರೆಗೆ ಪಟ್ಟದಲ್ಲಿ ಮುಂದುವರೆದಿರುವ ಅಧಿಕೃತ ಹೆಗ್ಗಳಿಕೆಗೆ ಅಂದು ರಾಣಿ 2ನೇ ಎಲಿಜಬೆತ್‌ ಪಾತ್ರರಾದರು.

ಈ ಮೂಲಕ ವಿಶ್ವದಲ್ಲೇ ದೀರ್ಘಾವಧಿಯವರೆಗೆ ಪಟ್ಟದಲ್ಲಿರುವ ರಾಣಿ ಎಂಬ ಕೀರ್ತಿಗೂ ಭಾಜನರಾದರು.  2ನೇ ಎಲಿಜಬೆತ್‌ (89) ಅವರು ತಮ್ಮ ಆಳ್ವಿಕೆಯ 63 ವರ್ಷ 7 ತಿಂಗಳು, 2 ದಿನವನ್ನು (23,226 ದಿನಗಳು, 16 ಗಂಟೆಗಳು ಮತ್ತು 30 ನಿಮಿಷ) ಪೂರ್ಣಗೊಳಿಸಿ  ತಮ್ಮ ಮುತ್ತಜ್ಜಿಯ ಅಮ್ಮ ರಾಣಿ ವಿಕ್ಟೋರಿಯಾ ಅವರು ನಿರ್ಮಿಸಿದ್ದ ದಾಖಲೆ ಮುರಿದರು. ರಾಣಿ ವಿಕ್ಟೋರಿಯಾ  1901ರಲ್ಲಿ ಮೃತಪಟ್ಟಾಗ ತಮ್ಮ ಪಟ್ಟಾಧಿಕಾರದ 63 ವರ್ಷ 7 ತಿಂಗಳು ಪೂರೈಸಿದ್ದರು.

ಇಪ್ಪತ್ತೈದನೆಯ ವಯಸ್ಸಿಗೇ ಬ್ರಿಟನ್‌ ರಾಣಿಯ ಪಟ್ಟ ಅಲಂಕರಿಸಿದ 2ನೇ ಎಲಿಜಬೆತ್‌ ಈವರೆಗೆ ವಿನ್ಸಂಟ್‌ ಚರ್ಚಿಲ್‌ ಅವರಿಂದ ಹಿಡಿದು ಡೇವಿಡ್‌ ಕ್ಯಾಮರಾನ್‌ವರೆಗೆ ಬ್ರಿಟನ್‌ನ 12 ಪ್ರಧಾನಮಂತ್ರಿಗಳು, 7ಮಂದಿ ಆರ್ಚ್‌ ಬಿಷಪ್‌ಗಳು, 7 ಮಂದಿ ಪೋಪ್‌ಗಳನ್ನು  ಕಂಡಿದ್ದಾರೆ.  ಇವರು ರಾಣಿಯಾಗಿ ಕಿರೀಟಧಾರಣೆ ಮಾಡುವಾಗ ಈಗಿನ ಪ್ರಧಾನಿ ಕ್ಯಾಮರಾನ್‌ ಹುಟ್ಟಿಯೇ ಇರಲಿಲ್ಲ! ಇವರು ಕಾಮನ್‌ವೆಲ್ತ್‌ನ 53 ರಾಷ್ಟ್ರಗಳ ಪೈಕಿ 16 ರಾಷ್ಟ್ರಗಳ ಮುಖ್ಯಸ್ಥರಾಗಿ, ಬ್ರಿಟನ್‌ ಚರ್ಚ್‌ನ ಗರ್ವನರ್‌ ಆಗಿಯೂ ಮುಂದುವರಿದಿದ್ದಾರೆ.

ಸುಮಾರು 132 ರಾಷ್ಟ್ರಗಳಿಗೆ ಭೇಟಿ ನೀಡಿ ಸಾವಿರಾರು ಭಾಷಣಗಳನ್ನು ಮಾಡಿರುವ ಈ ಹಿರಿಯ ರಾಣಿ ಹ್ಯಾಟು ಧರಿಸಿ, ಕೈಚೀಲ ಹಿಡಿದೇ ಹೊರ ಜಗತ್ತಿಗೆ ಸದಾ  ಕಾಣಿಸಿಕೊಂಡಿದ್ದಾರೆ. ರಾಜಪ್ರಭುತ್ವದಲ್ಲಿ ಘನತೆ ಮತ್ತು  ಸಾರ್ವಜನಿಕರ ನಂಬಿಕೆ  ಕಾಯ್ದುಕೊಂಡು ಬಂದಿರುವುದು ಇವರ ವಿಶೇಷ ಎಂದೇ ಹೇಳಲಾಗುತ್ತದೆ.

2ನೇ ಎಲಿಜಬೆತ್‌ 1926ರ ಏ. 21 ರಂದು ಜನಿಸಿದಾಗ ಅವರು ರಾಣಿಯಾಗಿ ಪಟ್ಟಕ್ಕೆ ಏರುವರು ಎಂದು ಯಾರೂ ಎಣಿಸಿರಲಿಲ್ಲ. ಅವರು ರಾಣಿಯಾಗಬೇಕಾಗಿ ಬಂದ ಸಂದರ್ಭವೂ ಅವರ ಜೀವನದ ಕುತೂಹಲಕರ ಘಟ್ಟವೇ.

2ನೇ ಎಲಿಜಬೆತ್‌ ಅವರ ತಂದೆ ರಾಜಕುಮಾರ ಆಲ್ಬರ್ಟ್‌ ಅವರು  ರಾಜ 5ನೇ ಜಾರ್ಜ್‌ ಮತ್ತು ರಾಣಿ ಮೇರಿ ದಂಪತಿಗೆ 2ನೇ ಮಗ. 5ನೇ ಜಾರ್ಜ್‌ ನಿಧನದ ಬಳಿಕ  ಎಲಿಜಬೆತ್‌ ತಂದೆಯ ಸೋದರ ರಾಜ 8ನೇ ಎಡ್ವರ್ಡ್‌ ಕೆಲ ಕಾಲ ಆಳ್ವಿಕೆ ನಡೆಸಿದರು. ಬಳಿಕ ಅಮೆರಿಕದ ವಿಚ್ಛೇದಿತ ಮಹಿಳೆಯ ಪ್ರೀತಿಗೆ ಸಿಲುಕಿ ರಾಜ ಪದವಿ ತ್ಯಜಿಸಿದರು. ಆಗ ಎಲಿಜಬೆತ್‌ ತಂದೆ ರಾಜಕುಮಾರ ಆಲ್ಬರ್ಟ್‌ ಅವರು ದೊರೆ 6ನೇ ಜಾರ್ಜ್‌ ಆಗಿ ಪಟ್ಟಾಧಿಕಾರ ಸ್ವೀಕರಿಸಿದರು.

ನಂತರದಲ್ಲಿ ತಂದೆ ಸಾವಿನ ಕಾರಣ 2ನೇ ಎಲಿಜಬೆತ್‌ ಅವರು 1952 ಫೆ. 6ರಂದು ರಾಣಿಯಾದರು.  2ನೇ ಎಲಿಜಬೆತ್‌  1947ರಲ್ಲಿ  ದೂರದ ಸಂಬಂಧಿ ಫಿಲಿಫ್‌ ಮೌಂಟ್‌ಬ್ಯಾಟೆನ್‌ ಅವರನ್ನು ವರಿಸಿದರು. ರಾಜಕುಮಾರರಾದ ಚಾರ್ಲ್‌್ಸ, ಎಡ್ವರ್ಡ್‌, ಆ್ಯಂಡ್ರೂ ಮತ್ತು ರಾಜಕುಮಾರಿ ಆ್ಯನ್‌ – ಈ ನಾಲ್ಕು ಮಕ್ಕಳನ್ನು ಹಡೆದರು.

ಈಗ ಹಲವು ಮೊಮ್ಮಕ್ಕಳು, ಕೆಲವು ಮರಿ ಮಕ್ಕಳ ಅಜ್ಜಿಯಾಗಿರುವ ಇವರದ್ದು ತುಂಬು ಜೀವನ. ಕ್ರಿಸ್‌ಮಸ್‌ ದಿನ ಕುಟುಂಬದವರೆಲ್ಲರೂ ಒಟ್ಟಿಗೆ ಸೇರಿ ಚರ್ಚ್‌ಗೆ ಭೇಟಿ ನೀಡುವ ಪದ್ಧತಿ ಇದೆ.

ಏಳುಬೀಳುಗಳು: ರಾಣಿ ಜೀವನ ಅನೇಕ ಏಳುಬೀಳುಗಳನ್ನೂ ಕಂಡಿದೆ. 1992 ರಲ್ಲಿ ವಿಂಡ್ಸರ್‌ ಕ್ಯಾಸೆಲ್‌ ಅರಮನೆ ಅಗ್ನಿದುರಂತಕ್ಕೆ ಒಳಗಾಯಿತು. ಅದೇ ವರ್ಷ ಹಿರಿಯ ಮಗ ಚಾರ್ಲ್ಸ್‌ ಸೇರಿದಂತೆ ಅವರ 3 ಮಕ್ಕಳ ದಾಂಪತ್ಯ ಜೀವನ ಬಿರುಕು ಬಿಟ್ಟಿತು. ಈ ವರ್ಷವನ್ನು ಸ್ವತಃ ರಾಣಿಯೇ ತಮ್ಮ ‘ಕರಾಳ ವರ್ಷ’ ಎಂದು ಕರೆದುಕೊಂಡಿದ್ದಾರೆ. 1997ರ ಆ. 31ರಂದು ಅವರ ಮಾಜಿ ಹಿರಿಯ ಸೊಸೆ ಡಯಾನಾ ಕಾರು ಅಪಘಾತದಲ್ಲಿ ಮೃತಪಟ್ಟರು. ಆ ಬಳಿಕ ಅವರು ಮಾಧ್ಯಮಗಳಿಂದ ಸಾಕಷ್ಟು ಟೀಕೆಗೊಳಗಾದರು.

‘ಜನರ ರಾಜಕುಮಾರಿ’ ಎಂದೇ ಜನಪ್ರಿಯವಾಗಿದ್ದ ಡಯಾನಾ ಸಾವಿಗೆ ರಾಷ್ಟ್ರ ಶೋಕಿಸುತ್ತಿದ್ದಾಗ ಅವರು ಅನೇಕ ದಿನ ಮೌನ ವಹಿಸಿದ್ದರು. ಇದರಿಂದಾಗಿ ಡಯಾನಾಗೆ ರಾಜಮನೆತನದ ಸಂಸ್ಕಾರ ನೀಡಲು ರಾಣಿಗೆ ಮನಸ್ಸಿಲ್ಲ ಎಂಬ ಸುದ್ದಿಗಳು ಹಬ್ಬಿ ಅವರ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುವಂತೆ ಆಯಿತು.

ಡಯಾನಾಗೆ ಸಲ್ಲಿಸಿದ ಶ್ರದ್ಧಾಂಜಲಿ ಹೂಗುಚ್ಛದೊಂದಿಗೆ ‘ಮುಳ್ಳುಗಳ ಕುಟುಂಬದಲ್ಲಿ ನೀನೊಂದು ಗುಲಾಬಿಯಾಗಿದ್ದೆ’  ಎಂಬಂತಹ ಬರವಣಿಗೆಗಳೂ ರಾರಾಜಿಸಿದವು. ಕೊನೆಗೆ ಕೆಲ ದಿನಗಳ ಬಳಿಕ ರಾಣಿ 2ನೇ ಎಲಿಜಬೆತ್‌, ಡಯಾನಾ ಬಗ್ಗೆ ಹೇಳಿಕೆ ಬಿಡುಗಡೆ  ಮಾಡಬೇಕಾಯಿತು.

ಸಂಸತ್ತಿನ ಹೊಸ ಅಧಿವೇಶನ ಯಾವಾಗಲೂ ರಾಣಿ ಭಾಷಣದೊಂದಿಗೇ ಆರಂಭವಾಗುತ್ತದೆ. ಈ ರಾಣಿ, ರಾಜಪ್ರಭುತ್ವದಲ್ಲಿ ಅನೇಕ ಸುಧಾರಣೆಗಳನ್ನೂ ಅಳವಡಿಸಿಕೊಂಡರು. ರಾಜಪ್ರಭುತ್ವದ ಕೆಲವು ಔಪಚಾರಿಕ ಕ್ರಮಗಳನ್ನು ಬಿಟ್ಟುಕೊಟ್ಟು ಆದಾಯ ತೆರಿಗೆ ನೀಡಲು ಒಪ್ಪಿಕೊಂಡರು. ಅರಮನೆ ಬಜೆಟ್‌ಗೆ ಕಡಿವಾಣ ಹಾಕಿ ಬಕಿಂಗ್‌ ಹ್ಯಾಂ ಮತ್ತಿತರ ತಮ್ಮ ಅಧಿಕೃತ ನಿವಾಸಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿದರು. 

‘ತಂದೆ ಮರಣದ ನಂತರ ಆರಂಭವಾಗುವ ತಮ್ಮ ಆಳ್ವಿಕೆ ದೀರ್ಘಾವಧಿ ಸಾಧನೆಯನ್ನು ಸಮಾರಂಭದಂತೆ ಆಚರಿಸಿಕೊಳ್ಳಲು ರಾಣಿ ಬಯಸಿರಲಿಲ್ಲ. ‘ಅವರಿಗೆ ಇದು ಮಾಮೂಲಿ ದಿನವೇ ಆಗಿತ್ತು’ ಎಂದು ಆ್ಯಂಡ್ರೂ, ಬಿಬಿಸಿಗೆ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈವರೆಗಿನ ಆಳ್ವಿಕೆ ಅವಧಿಯಲ್ಲಿ ಅವರು ವಿಶೇಷ ಸಾಧನೆಯನ್ನೇನೂ ಮಾಡಿಲ್ಲ ಎಂಬ ಟೀಕೆಗಳೂ  ವ್ಯಾಪಕವಾಗಿವೆ.

ಆಸಕ್ತಿಗಳು
ನಿಗೂಢ ಕಥಾವಸ್ತುವಿನ ಪುಸ್ತಕ ಓದುವುದು, ಪದಬಂಧದ ಒಗಟು ಬಿಡಿಸುವುದು, ಕುದುರೆ ರೇಸ್‌, ಟಿವಿಯಲ್ಲಿ ಕುಸ್ತಿ ವೀಕ್ಷಣೆ ಇವರ ಹವ್ಯಾಸಗಳು. ಕುದುರೆಗಳು ಮತ್ತು ಕಾರ್ಗಿ ಜಾತಿಯ ನಾಯಿಗಳ ಬಗ್ಗೆ ವಿಶೇಷ  ವ್ಯಾಮೋಹ. ರಾಜಮನೆತನದ ಅಧಿಕೃತ  ಅಂತರ್ಜಾಲ ತಾಣದ ಪ್ರಕಾರ ಈಗಲೂ ಇವರಿಗೆ ಕುದುರೆ ಸವಾರಿ ಬಲು ಪ್ರಿಯ. ಇವರ ಅರಮನೆಯಲ್ಲಿ ಇರುವ ನಾಯಿಗಳ ಸಂಖ್ಯೆ ಸುಮಾರು 30. ಸುಮಾರು 70 ವರ್ಷಗಳ ದೀರ್ಘ ಕಾಲದ ವೈವಾಹಿಕ ಜೀವನ ಕೂಡ ಇವರ ದಾಖಲೆ ಪಟ್ಟಿಯಲ್ಲಿ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT