ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ಕನ್ಸರ್ವೇಟಿವ್‌ ಪಕ್ಷಕ್ಕೆ ಅನಿರೀಕ್ಷಿತ ಜಯ

ವಿದೇಶ ವಿದ್ಯಮಾನ
Last Updated 10 ಮೇ 2015, 19:30 IST
ಅಕ್ಷರ ಗಾತ್ರ

ಬ್ರಿಟನ್ನಿನ 56ನೇ ಸಂಸತ್ತಿನ ಹೌಸ್‌ ಆಫ್‌ ಕಾಮನ್ಸ್‌ಗೆ (ಕೆಳಮನೆ) ಈಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷ ಅಚ್ಚರಿಯ ಗೆಲುವು ಸಾಧಿಸಿದೆ. ಸರಳ ಬಹುಮತ ಪಡೆದು ಸಮೀಕ್ಷಾ ವರದಿಗಳನ್ನೆಲ್ಲಾ ತಲೆಕೆಳಗು ಮಾಡಿದೆ.

650 ಸ್ಥಾನಗಳ ಪೈಕಿ ಸರ್ಕಾರ ರಚಿಸಲು ಅಗತ್ಯವಿರುವ 326 ಸ್ಥಾನಗಳನ್ನೂ ಮೀರಿ ಕನ್ಸರ್ವೇಟಿವ್‌ ಪಕ್ಷ 331 ಸ್ಥಾನ ಬಾಚಿಕೊಂಡಿದೆ.  ಪ್ರಧಾನಿ ಡೇವಿಡ್‌ ಕ್ಯಾಮೆರಾನ್‌ಗೆ ಮತ್ತೊಮ್ಮೆ ಗದ್ದುಗೆ ಹಿಡಿಯುವ ಅವಕಾಶ ಮಾಡಿಕೊಟ್ಟಿದೆ.

2010ರಲ್ಲಿ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷವು 307 ಕ್ಷೇತ್ರಗಳಲ್ಲಿ ಮಾತ್ರ ಗೆದ್ದ್ದು, 57 ಸ್ಥಾನಗಳನ್ನು ಪಡೆದಿದ್ದ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿತ್ತು. ಈಗ 1992ರ ನಂತರ ಇದೇ ಮೊದಲ ಬಾರಿಗೆ ಸ್ವಂತ ಬಲದಿಂದ ಮುಂದಿನ ಐದು ವರ್ಷಗಳವರೆಗೆ ಸರ್ಕಾರ ನಡೆಸಲು ಸಜ್ಜಾಗಿದೆ.

ಈ ಹಿಂದೆ ಆಡಳಿತಾರೂಢ ಪಕ್ಷ ಒಂದು ಬಾರಿ ಮಾತ್ರ ಅಂದರೆ ಮಾರ್ಗರೇಟ್‌ ಥ್ಯಾಚರ್‌ ಪ್ರಧಾನಿಯಾಗಿದ್ದ 1980ರ ದಶಕದಲ್ಲಿ ಹಿಂದಿನ ಚುನಾವಣೆಗಿಂತ ಹೆಚ್ಚು ಮತ ಪಡೆದು ತನ್ನ ಬಹುಮತ  ಹೆಚ್ಚಿಸಿಕೊಂಡಿತ್ತು.

ಈ ಸಲ ಚುನಾವಣಾ ಪೂರ್ವದ ಬಹುತೇಕ ಸಮೀಕ್ಷೆಗಳು ಯಾವ ಪಕ್ಷಕ್ಕೂ ಬಹುಮತ ಲಭಿಸುವುದಿಲ್ಲ, ಅತಂತ್ರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದಿದ್ದವು. ಕೆಲ ಸಮೀಕ್ಷೆಗಳು ಕನ್ಸರ್ವೇಟಿವ್‌ ಪಕ್ಷಕ್ಕಿಂತ ಎಡ್ವರ್ಡ್‌ ಮಿಲಿಬಾಂಡ್‌ ನೇತೃತ್ವದ ಲೇಬರ್‌ ಪಕ್ಷ ಮುನ್ನಡೆ ಸಾಧಿಸುತ್ತದೆ ಇಲ್ಲವೇ ಎರಡೂ ಪಕ್ಷಗಳು ಸಮಬಲ ಸಾಧಿಸುತ್ತವೆ ಎಂದೂ ಅಂದಾಜು ಮಾಡಿದ್ದವು.  ಇದಾವುದೂ ನಿಜವಾಗ­ಲಿಲ್ಲ.

ಲೇಬರ್‌ ಪಕ್ಷವಂತೂ ಸತತ ಎರಡನೇ ಬಾರಿಗೆ ಸೋಲು ಕಂಡಿತು.  ಭಾವಿ ಪ್ರಧಾನಿ ಎಂದೇ ಬಿಂಬಿಸಲಾಗಿದ್ದ ಈ ಪಕ್ಷದ ನಾಯಕ ಎಡ್ವರ್ಡ್‌ ಮಿಲಿಬಾಂಡ್‌ ತಮ್ಮ ಕ್ಷೇತ್ರದಲ್ಲಿ ಜಯ ಗಳಿಸಿದರೂ ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ಸೋತರು. ಈ ಹಿಂದಿನಿಂದಲೂ ಲೇಬರ್‌ ಪಕ್ಷದ ಭದ್ರಕೋಟೆಯಾಗಿದ್ದ ಸ್ಕಾಟ್ಲೆಂಡ್‌ನಲ್ಲಿ ಪಕ್ಷ  ನೆಲ­ಕಚ್ಚಿತು. ಹೀಗಾಗಿ ಅವರು ಪಕ್ಷದ ನಾಯಕತ್ವಕ್ಕೆ ರಾಜೀನಾಮೆಯನ್ನೂ ನೀಡಬೇಕಾಯಿತು. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿದ್ದ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷ ಕೇವಲ 8 ಸ್ಥಾನಗಳನ್ನು ಪಡೆದು ಸಂಪೂರ್ಣವಾಗಿ ನೆಲಕಚ್ಚಿತು. ಈಗ ಲೇಬರ್‌ ಪಕ್ಷ ಮತ್ತು ಲಿಬರಲ್‌ ಡೆಮಾಕ್ರಟಿಕ್‌ ಪಕ್ಷಗಳು ಹೊಸ ನಾಯಕತ್ವ ಪಡೆಯಬೇಕಾಗಿದೆ.

ಭರ್ಜರಿ ಗೆಲುವು: ಸ್ಕಾಟ್ಲೆಂಡ್‌ನಲ್ಲಿ  ಸ್ಕಾಟಿಷ್‌ ನ್ಯಾಷನಲ್‌ ಪಾರ್ಟಿ (ಎಸ್ಎನ್‌ಪಿ)   59 ಸ್ಥಾನಗಳಲ್ಲಿ 56 ಸ್ಥಾನಗಳಲ್ಲಿ ಭರ್ಜರಿ ಜಯ ಗಳಿಸಿ ಇತಿಹಾಸ ನಿರ್ಮಿಸಿದೆ.  ಸಂಸತ್‌ ಕಲಾಪ ನಡೆಯುವ ವೆಸ್‌್ಟಮಿನಿಸ್ಟರ್‌ ಪ್ಯಾಲೆಸ್‌ನಲ್ಲಿ ಮೊದಲ ಅಧಿವೇಶನ ಈ ತಿಂಗಳ 18ಕ್ಕೆ ನಿಗದಿಯಾಗಿದ್ದು ಅಂದೇ ಹೊಸ ಸದಸ್ಯರು ಪ್ರಮಾಣವಚನ ಸ್ವೀಕರಿಸುವರು. ಬ್ರಿಟನ್‌ ರಾಣಿ ಎಲಿಜಬೆತ್‌ –2  ಅವರು 27ರಂದು ಸಂಸತ್ತನ್ನು ಉದ್ದೇಶಿಸಿ ಮಾತನಾಡುವರು. ಇವರ ಭಾಷಣ ಹೊಸ ಸರ್ಕಾರದ ಕಾರ್ಯಸೂಚಿಯನ್ನು ಬಿಂಬಿಸಲಿದೆ.

ರಾಣಿ ಭಾಷಣ ಬಳಿಕ ಶಾಸಕಾಂಗ ಕಾರ್ಯಕ್ರಮದ ಬಗ್ಗೆ ಜನಪ್ರತಿನಿಧಿಗಳು ಮತ ಹಾಕಲಿದ್ದು ಇದು ಹೊಸ ಸರ್ಕಾರ ಎದುರಿಸಲಿರುವ ಮೊದಲ ಅಗ್ನಿ ಪರೀಕ್ಷೆಯಾಗಿರುತ್ತದೆ.  ಇದೇ ಮೊದಲ ಬಾರಿಗೆ ಹೌಸ್‌ ಆಫ್‌ ಕಾಮನ್ಸ್‌ಗೆ ಹೆಚ್ಚು ಮಹಿಳೆಯರು (ಶೇ 29) ಆಯ್ಕೆಯಾಗಿದ್ದಾರೆ.  ಕಳೆದ ಸಲ ಈ ಪ್ರಮಾಣ ಶೇ23 ಇತ್ತು.

ಪ್ರಮುಖ ಪಾತ್ರ: ಬ್ರಿಟನ್‌ನ ಒಟ್ಟು 5 ಕೋಟಿ ಮತದಾರರಲ್ಲಿ 6.15 ಲಕ್ಷ ಮಂದಿ ಭಾರತ ಮೂಲದವರು. ಇವರು ಕನ್ಸರ್ವೇಟಿವ್‌ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತ ಮೂಲದ ಮತದಾರರು ಈವರೆಗೆ ಲೇಬರ್‌ ಪಕ್ಷಕ್ಕೆ ಹೆಚ್ಚು ಹತ್ತಿರವಾಗಿದ್ದರು. ಇದಕ್ಕೆ ಕಾರಣ, ವಲಸಿಗರ ಮತ್ತು ದುಡಿಯುವ ವರ್ಗದವರ ಪರ ಪಕ್ಷಕ್ಕಿದ್ದ ಧೋರಣೆ . ಆದರೆ ಈಗ ಈ ವರ್ಗ ಕನ್ಸರ್ವೇಟಿವ್ ಪಕ್ಷದತ್ತ ಒಲವು ತೋರಿರುವುದನ್ನು ಈ ಚುನಾವಣೆ ಸೂಚಿಸುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಕ್ಯಾಮೆರಾನ್‌ ಅವರೂ ಪ್ರಚಾರದ  ದಿನಗಳಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯದವರ ಜತೆ  ಹೆಚ್ಚು ಸಮಯ ಕಳೆದಿದ್ದರು.

ಎರಡನೇ ಬಾರಿಗೆ ಕ್ಯಾಮೆರಾನ್‌ ಅವರ ಆಯ್ಕೆ ಭಾರತ– ಬ್ರಿಟನ್‌ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.  ಮೋದಿ ನೇತೃತ್ವದ ಸರ್ಕಾರದ ಕುರಿತು ಅವರು ಈಗಾಗಲೇ ಸಕಾರಾತ್ಮಕ ಸೂಚನೆಗಳನ್ನು ನೀಡಿದ್ದಾರೆ.

ಅಲ್ಲದೆ ಲಂಡನ್‌ ಪಾರ್ಲಿಮೆಂಟ್‌ ಸ್ಕ್ವೇರ್‌ನಲ್ಲಿ ಮಹಾತ್ಮಾಗಾಂಧಿ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ ನೀಡಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕಾಗಿ ಬೆಂಬಲ ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಬ್ರಿಟನ್‌ ಭೇಟಿಗೆ ಮೋದಿ ಅವರಿಗೆ ಆಹ್ವಾನ ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಮುಂದಿರುವ ಸವಾಲು:  48 ವರ್ಷದ ಕ್ಯಾಮೆರಾನ್‌ಗೆ ಈ ಗೆಲುವು ವೈಯಕ್ತಿಕವಾಗಿ ಕೂಡ ಮಹತ್ವದ್ದು. ಅವರು ಜಯ ಗಳಿಸುವ ಬಗ್ಗೆಯೇ ಶಂಕೆ ವ್ಯಕ್ತಪಡಿಸುತ್ತಿದ್ದ ಅವರ ಪಕ್ಷದೊಳಗಿನ ಸದಸ್ಯರಿಗೆ ಇದು ಭಾರಿ ಹೊಡೆತ. ಯೂರೋಪ್‌ ಒಕ್ಕೂಟದಲ್ಲಿ ಬ್ರಿಟನ್‌ ಉಳಿಯಬೇಕೇ ಬೇಡವೇ ಎಂಬ ಬಗ್ಗೆ ಜನಮತಗಣನೆಯನ್ನು 2017ರಲ್ಲಿ ನಡೆಸುವುದಾಗಿ ಕ್ಯಾಮೆರಾನ್‌ ಭರವಸೆ ನೀಡಿದ್ದರು.  ಆದ್ದರಿಂದ ಇನ್ನು ಎರಡು ವರ್ಷಗಳಲ್ಲಿ ಜನಮತಗಣನೆ ನಡೆಯುವುದು ಖಚಿತ.   ಕಳೆದ 80 ವರ್ಷಗಳಿಂದ ಪ್ರತ್ಯೇಕತೆಗಾಗಿ ಒತ್ತಾಯಿಸುತ್ತಿರುವ ಎಸ್‌ಎನ್‌ಪಿ ಸಂಸದರ ಧ್ವನಿ ಇನ್ನು ಸಂಸತ್ತಿನಲ್ಲೂ ಮೊಳಗಲಿದೆ.

ಸ್ವತಂತ್ರ ಸ್ಕಾಟ್ಲೆಂಡ್‌ಗಾಗಿ 8 ತಿಂಗಳ ಹಿಂದಷ್ಟೆ ಸ್ಕಾಟ್ಲೆಂಡ್‌ ನಡೆಸಿದ ಜನಮತಗಣನೆಯಲ್ಲಿ ಶೇ 45ರಷ್ಟು ಮಂದಿ ಮಾತ್ರ ಬ್ರಿಟನ್‌ನಿಂದ ಸ್ಕಾಟ್ಲೆಂಡ್‌ ಹೊರಬರಬೇಕೆಂದು ಬಯಸಿದ್ದರು.

ಸ್ಕಾಟ್ಲೆಂಡ್‌ ಪ್ರತ್ಯೇಕತೆಯ ಬೇಡಿಕೆ ಮತ್ತು ಬ್ರಿಟನ್‌ನನ್ನು ಇಡಿಯಾಗಿ ಉಳಿಸಿಕೊಳ್ಳುವುದು ‘ಗ್ರೇಟರ್‌ ಬ್ರಿಟನ್‌’ ನಿರ್ಮಾಣದ ಆಶಯ ಹೊಂದಿರುವ ಕ್ಯಾಮೆರಾನ್‌ ಮುಂದಿರುವ  ಸವಾಲು.

ಕ್ಯಾಮೆರಾನ್‌ ಮತ್ತು ಎಸ್‌ಎನ್‌ಪಿಯ ನಾಯಕಿ ನಿಕೋಲಾ ಸ್ಟರ್ಜನ್‌ ಅವರ ಗೆಲುವು ಸ್ಥಳೀಯ ರಾಜಕೀಯವನ್ನಷ್ಟೇ ಅಲ್ಲ ಯುನೈಟೆಡ್‌ ಕಿಂಗ್‌ಡಂನ ಭವಿಷ್ಯವನ್ನೇ ಮರು ರೂಪಿಸುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಬ್ರಿಟನ್‌ ಹೀಗಿದೆ
ಇಂಗ್ಲೆಂಡ್‌ –ಸ್ಕಾಟ್ಲೆಂಡ್, ವೇಲ್‌್ಸ ಮತ್ತು ಉತ್ತರ ಐರ್ಲೆಂಡ್‌ ಒಳಗೊಂಡ ದ್ವೀಪ ರಾಷ್ಟ್ರ ಯುನೈಟೆಡ್‌ ಕಿಂಗ್‌ಡಂ. ಯೂರೋಪ್‌ನ ವಾಯವ್ಯ ಭಾಗದಲ್ಲಿದೆ. ಯುನೈಟೆಡ್‌ ಕಿಂಗ್‌ಡಂ ಆಫ್‌ ಗ್ರೇಟ್‌ ಬ್ರಿಟನ್‌ ಮತ್ತು ನಾರ್ದನ್‌ ಐರ್ಲೆಂಡ್‌ ಇದರ ಪೂರ್ಣ ಹೆಸರು. ಆದರೆ ಯುನೈಟೆಡ್‌ ಕಿಂಗ್‌ಡಂ (ಯುಕೆ) ಅಥವಾ ಬ್ರಿಟನ್‌ ಎಂದೇ ಜನಪ್ರಿಯ.

ಅಂಕಿ ಅಂಶ
191ಈ ಸಲ ಗೆದ್ದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ
143ಕಳೆದ ಬಾರಿ ಜಯ ಗಳಿಸಿದ್ದ ಮಹಿಳಾ ಅಭ್ಯರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT