ನ್ಯೂಯಾರ್ಕ್ (ಐಎಎನ್ಎಸ್): ಭೋಪಾಲ್ ಅನಿಲ ದುರಂತ ಪ್ರಕರಣದಲ್ಲಿ ‘ಯೂನಿಯನ್ ಕಾರ್ಬೈಡ್ ಗ್ರೂಪ್’ ಪಾತ್ರವಿರುವುದನ್ನು ಪುಷ್ಟೀಕರಿಸುವ ಇನ್ನೊಂದು ಸಾಕ್ಷ್ಯವು ಬುಧವಾರ ಲಭ್ಯವಾಗಿದೆ. ಈ ಸಾಕ್ಷ್ಯವು ಭೋಪಾಲ್ ಕೀಟನಾಶಕ ತಯಾರಿಕಾ ಸ್ಥಾವರದ ವಿನ್ಯಾಸ ಮತ್ತು ರಚನೆಯಲ್ಲಿ ಯೂನಿಯನ್ ಕಾರ್ಬೈಡ್ ನೇರವಾದ ಪಾತ್ರ ವಹಿಸಿದೆ ಎಂದು ದೃಢೀಕರಿಸುತ್ತದೆ.
ಹಿಂದಿನ ಯೂನಿಯನ್ ಕಾರ್ಬೈಡ್ನ ಕೆಲಸಗಾರರ ಹೇಳಿಕೆಗಳು ಮತ್ತು ತಜ್ಞರ ಪರಿಶೀಲನೆಯನ್ನೂ ಒಳಗೊಂಡಿರುವ ಈ ಸಾಕ್ಷ್ಯದ ಪ್ರಕಾರ, ಕಂಪೆನಿಯ ಸ್ಥಾವರ ಮತ್ತು ಅದರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ವಿನ್ಯಾಸವು ಅಸಮರ್ಪಕವಾಗಿತ್ತು. ಇದು ಭೋಪಾಲ್ನಲ್ಲಿ ವಿಷಪೂರಿತ ತ್ಯಾಜ್ಯಗಳಿಂದ ತೊಂದರೆ ಉಂಟಾಗಲು ಕಾರಣವಾಯ್ತು ಎಂದು ತಿಳಿದು ಬಂದಿದೆ.
ಈಗ ಮುಚ್ಚಲಾಗಿರುವ ಭೋಪಾಲ್ ಸ್ಥಾವರದ ಕಲುಷಿತ ಸ್ಥಳವನ್ನು ಸ್ವಚ್ಛಗೊಳಿಸಲು ಯೂನಿಯನ್ ಕಾರ್ಬೈಡ್ನ ಈಗಿನ ಅಂಗಸಂಸ್ಥೆ ಡೊವ್ ನಿರಾಕರಿಸಿದ್ದು, ಅದಕ್ಕೆ ಯೂನಿಯನ್ ಕಾರ್ಬೈಡ್ನ ಹಿಂದಿನ ಅಂಗಸಂಸ್ಥೆ ಬೀಯರ್ ಜವಾಬ್ದಾರಿ ಎಂದು ಹೇಳಿದೆ.