ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಗೆದ್ದ ಕ್ಯಾಮೆರಾನ್

ಬ್ರಿಟನ್‌ ಸಂಸತ್‌ ಚುನಾವಣೆ: ಕನ್ಸರ್ವೇಟಿವ್‌್ ಪಕ್ಷಕ್ಕೆ ಅಚ್ಚರಿಯ ಜನಾದೇಶ
Last Updated 8 ಮೇ 2015, 20:12 IST
ಅಕ್ಷರ ಗಾತ್ರ
ADVERTISEMENT








ಲಂಡನ್‌ (ಪಿಟಿಐ/ಐಎಎನ್‌ಎಸ್‌): 
ಬ್ರಿಟನ್ನಿನ ಸಂಸತ್‌ಗೆ ಗುರುವಾರ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್‌್ ಪಾರ್ಟಿ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಪ್ರಧಾನಿ ಡೇವಿಡ್‌ ಕ್ಯಾಮೆರಾನ್‌ ಇನ್ನೊಂದು ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ವೇದಿಕೆ ಸಜ್ಜಾಗಿದೆ.

650 ಸದಸ್ಯ ಬಲದ ಸಂಸತ್‌ನಲ್ಲಿ  ಕನ್ಸರ್ವೇಟಿವ್‌ ಪಾರ್ಟಿಯು 331  ಸ್ಥಾನಗಳನ್ನು ಪಡೆದುಕೊಂಡಿದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ. ಅಲ್ಲಿಗೆ ಬ್ರಿಟನ್‌ನಲ್ಲಿ ಸಮ್ಮಿಶ್ರ ಸರ್ಕಾರದ ಯುಗ ಅಂತ್ಯವಾಗಲಿದೆ.

2010ರ ಚುನಾವಣೆಯಲ್ಲಿ  ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ.  ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕನ್ಸರ್ವೇಟಿವ್‌ ಪಾರ್ಟಿಯು 306 ಸ್ಥಾನಗಳನ್ನು ಪಡೆದುಕೊಂಡಿತ್ತು. ಮಿತ್ರ ಪಕ್ಷ ಲಿಬರಲ್‌್ ಡೆಮಾಕ್ರಟ್ಸ್‌ ಜತೆ ಸೇರಿ ಸರ್ಕಾರ ರಚಿಸಿತ್ತು. 

ಬುಡಮೇಲಾದ ಲೆಕ್ಕಾಚಾರ: ಈ ಬಾರಿ ಕೂಡ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ  ಎಂದು  ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಈ ಲೆಕ್ಕಾಚಾರ ಬುಡಮೇಲಾಗಿದೆ.

ಮಿಲಿಬಾಂಡ್‌ ರಾಜೀನಾಮೆ: ಈ ಚುನಾವಣೆಯಲ್ಲಿ ಹೀನಾಯವಾಗಿ ಪರಾಭವಗೊಂಡಿರುವ ಲೇಬರ್‌ಪಾರ್ಟಿಯು 232 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಸೋಲಿನ ಹೊಣೆ ಹೊತ್ತು ಪಕ್ಷದ ಮುಖ್ಯಸ್ಥ ಎಡ್‌್ ಮಿಲಿಬಾಂಡ್‌ ರಾಜೀನಾಮೆ ನೀಡಿದ್ದಾರೆ. 2010ರಲ್ಲಿ ಲೇಬರ್‌ಪಾರ್ಟಿಯು 258 ಸ್ಥಾನಗಳನ್ನು ಪಡೆದುಕೊಂಡಿತ್ತು. 1987ರ ಬಳಿಕ  ಪಕ್ಷವು ದಯನೀಯವಾಗಿ ಪರಾಭವಗೊಂಡಿದೆ.

ಲಿಬರಲ್‌ ಡೆಮಾಕ್ರಟ್ಸ್‌ ಪಾರ್ಟಿಗೂ (ಎಲ್‌ಡಿ) ಇದೇ ಗತಿ ಬಂದಿದೆ.  ಅದರ ಸ್ಥಾನಬಲ  57 ಸ್ಥಾನಗಳಿಂದ 8ಕ್ಕೆ ಕುಸಿದಿದೆ.  ಸೋಲಿನ   ಹೊಣೆ ಹೊತ್ತು ಎಲ್‌ಡಿ ಮುಖಂಡ ನಿಕ್‌್ ಕ್ಲೆಗ್‌  ರಾಜೀನಾಮೆ ನೀಡಿದ್ದಾರೆ.

ಎಸ್‌ಎನ್‌ಪಿ ಅಲೆ: ಅಚ್ಚರಿಯ ಬೆಳವಣಿಗೆಯಲ್ಲಿ ಸ್ಕಾಟಿಶ್‌ ನ್ಯಾಷನಲ್‌ ಪಾರ್ಟಿ (ಎಸ್‌ಎನ್‌ಪಿ) ಈ ಚುನಾವಣೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಎನ್ಎಸ್‌ಪಿ ಅಲೆಗೆ ಎದುರಾಳಿಗಳು ಕೊಚ್ಚಿ ಹೋಗಿದ್ದಾರೆ. ಪಕ್ಷವು ಸ್ಕಾಟ್ಲೆಂಡ್‌ನ ಒಟ್ಟು  59 ಕ್ಷೇತ್ರಗಳಲ್ಲಿ 56ರನ್ನು ವಶಪಡಿಸಿಕೊಂಡಿದೆ. ಇದರಿಂದಾಗಿ  ಸ್ಕಾಟ್ಲೆಂಡ್‌ ಪ್ರತ್ಯೇಕತಾ ಆಂದೋಲನಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. 1974ರ ಬಳಿಕ ಪಕ್ಷದ ದೊಡ್ಡ ಸಾಧನೆ ಇದು ಎಂದೇ ಬಣ್ಣಿಸಲಾಗಿದೆ. ಆಗ ಪಕ್ಷವು 11 ಸ್ಥಾನಗಳಲ್ಲಿ ಗೆದ್ದಿತ್ತು. 2010ರ ಚುನಾವಣೆಯಲ್ಲಿ ಕೇವಲ ಆರು ಸ್ಥಾನಗಳನ್ನು ಗಳಿಸಿತ್ತು.

ಭಾರತದ ವಿದ್ಯಾರ್ಥಿಗಳಿಗೆ ಖುಷಿ ತಂದ ಗೆಲುವು: ಬ್ರಿಟನ್‌ನಲ್ಲಿ ಓದುವುದಕ್ಕೆ ಹಂಬಲಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಎಸ್‌ಎನ್‌ಪಿಯ  ಅಭೂತಪೂರ್ವ ಗೆಲುವು ಖುಷಿ ತಂದಿದೆ. ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಸ್ಕಾಟಿಷ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಕರೆಸಿಕೊಳ್ಳುವುದು ತನ್ನ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು  ಚುನಾವಣಾ ಪ್ರಣಾಳಿಕೆಯಲ್ಲಿ ಎಸ್‌ಎನ್‌ಪಿ ಹೇಳಿಕೊಂಡಿತ್ತು.

ಮೋದಿ ಶೈಲಿಯ ಪ್ರಚಾರ:  ಚುನಾವಣೆ ಪ್ರಚಾರದ ವೇಲೆ ಕ್ಯಾಮೆರಾನ್‌ ಅವರು ಭಾರತ ಮೂಲದ ಮತದಾರರನ್ನು ಓಲೈಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶೈಲಿ ಅನುಸರಿಸಿದ್ದರು.  ‘ಫಿರ್‌ ಏಕ್‌ ಬಾರ್‌ ಕ್ಯಾಮೆರಾನ್‌ ಸರ್ಕಾರ್‌’ (ಕ್ಯಾಮೆರಾನ್‌ ಸರ್ಕಾರಕ್ಕೆ ಇನ್ನೊಂದು ಅವಧಿ) ಎಂದು ಹಿಂದಿಯಲ್ಲಿ ಮಾಡಿದ್ದ ಘೋಷಣೆ ಈಗ ನಿಜವಾಗಿದೆ.

ಮೂರ್ತಿ ಅಳಿಯನ ಚೊಚ್ಚಲ ಪ್ರವೇಶ

ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್‌ ಅವರು  ಕನ್ಸರ್ವೇಟಿವ್‌ ಪಾರ್ಟಿಯ ಪ್ರಬಲ ಕೋಟೆ ಎನಿಸಿಕೊಂಡಿರುವ ರಿಚ್‌ಮಂಡ್‌ ಕ್ಷೇತ್ರದಿಂದ 27,744 ಮತಗಳನ್ನು ಪಡೆದು ಗೆದ್ದಿದ್ದಾರೆ. ಬ್ರಿಟನ್‌ ಸಂಸತ್‌ಗೆ ಇದೇ ಮೊದಲ ಬಾರಿ ಆಯ್ಕೆಯಾಗಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್ ಅವರು ಇಷ್ಟು ವರ್ಷಗಳವರೆಗೆ ರಿಚ್‌ಮಂಡ್‌್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT